Bengaluru | ಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಾಸ್ಕೋ ಒಲಂಪಿಕ್ಸ್ ನ ಚಿನ್ನದ ಪದಕ ಗೆದ್ದಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದು, ಚಿನ್ನ, ಬೆಳ್ಳಿ ಪದಕ ಸೇರಿದಂತೆ 8 ಅಂತಾರಾಷ್ಟ್ರೀಯ ಪದಕಗಳು, ಒಂದು ಕ್ಯಾಮರಾ, ಒಂದು ಕೊಡಗು ಕತ್ತಿ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ನಂದಿನಿ ಲೇಔಟ್ ಮಾಣಿಕ್ಯ (31) ಹಾಗೂ ಬನಶಂಕರಿ ನಿವಾಸಿ ಭರತ್ (25) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಮಾಣಿಕ್ಯ ವಿರುದ್ಧ ಕರ್ನಾಟಕದಲ್ಲಿ 25 ಹಾಗೂ ತಮಿಳುನಾಡಿನಲ್ಲಿ 8 ಸೇರಿದಂತೆ ಒಟ್ಟು 33 ಪ್ರಕರಣ ದಾಖಲಾಗಿವೆ. ಇನ್ನು ಭರತ್ ವಿರುದ್ದ ಎರಡು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಅ.25ರಂದು ಸೋಮಯ್ಯ ಅವರು ಕುಟುಂಬ ಸಮೇತ ಸ್ವಂತ ಊರಾದ ಕೊಡಗಿಗೆ ಹೋಗಿದ್ದರು. ಅ.28ಕ್ಕೆ ವಾಪಸ್ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಸೋಮಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ 8 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ಸುಳಿವು ಆಧರಿಸಿ ಇಬ್ಬರು ಆರೋಪಿಗಳನ್ನು ರಾಮನಗರ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.






