Bengaluru | ವೃದ್ಧಾಶ್ರಮ ನಡೆಸುವ ಹೆಸರಿನಲ್ಲಿ ವಂಚನೆ: ಉಡುಪಿ ಮೂಲದ ಆರೋಪಿಯ ಬಂಧನ, 12 ಕಾರುಗಳ ವಶ

ಬೆಂಗಳೂರು : ವೃದ್ಧಾಶ್ರಮ ನಡೆಸುವ ಹೆಸರಿನಲ್ಲಿ ಸಾರ್ವಜನಿಕರಿಂದ ಕಾರುಗಳನ್ನು ಬಾಡಿಗೆಗೆ ಪಡೆದು ಬೇರೆಡೆ ಅಡಮಾನವಿರಿಸಿ ವಂಚಿಸುತ್ತಿದ್ದ ಉಡುಪಿ ಮೂಲದ ಓರ್ವ ಆರೋಪಿಯನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದು, 1.20 ಕೋಟಿ ರೂ. ಮೌಲ್ಯದ 12 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಮೂಲದ ಕುಂದಾಪುರ ನಿವಾಸಿ ಸುನಿಲ್ ನಾಯಕ್(48) ಬಂಧಿತ ಆರೋಪಿಯಾಗಿದ್ದು, ಈ ಹಿಂದೆ ಈತನು ಟ್ರಾವೆಲ್ಸ್ ಎಜೆಂಟ್ ಆಗಿದ್ದನು ಎಂದು ತಿಳಿದು ಬಂದಿದೆ.
ಕನಕಪುರ ಮುಖ್ಯರಸ್ತೆಯ ತಲಘಟ್ಟಪುರದ ಬಳಿ ಓರ್ವ ವ್ಯಕ್ತಿಯು ವೃದ್ಧಾಶ್ರಮ ನಡೆಸುತ್ತಿದ್ದರು. ವೃದ್ಧಾಶ್ರಮದಲ್ಲಿರುವ ವಯಸ್ಸಾದ ವೃದ್ಧರನ್ನು ಆಸ್ಪತ್ರೆಗೆ ಹಾಗೂ ಇತರೆ ಪ್ರದೇಶಗಳಿಗೆ ಕರೆದುಕೊಂಡು ಹೋಗಲು ಕಾರಿನ ಅವಶ್ಯಕತೆ ಇದೆ ಎಂದು ತಿಳಿಸಿ ಇತರರಿಂದ ಕಾರುಗಳನ್ನು ಬಾಡಿಗೆಗೆಂದು ಪಡೆಯುತ್ತಿದ್ದರು. ಆದರೆ ಆ ಕಾರುಗಳನ್ನು ಬೇರೆಯವರ ಬಳಿ ಅಡಮಾನವಿಟ್ಟು ಲಕ್ಷಾಂತರ ಹಣವನ್ನು ಪಡೆದು ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ವಿಜಯ ಬ್ಯಾಂಕ್ ಲೇಔಟ್ನ ನಿವಾಸಿಯೊಬ್ಬರು ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ, ಜೆ.ಪಿ.ನಗರ ನಗರ 8ನೇ ಹಂತದ ಬಿ.ಡಿ.ಎ. ಲೇಔಟ್ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿಯು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.




