Bengaluru | ಅಕ್ರಮವಾಗಿ ಇ-ಖಾತಾ: ಎರಡು ಪ್ರತ್ಯೇಕ ಎಫ್‍ಐಆರ್ ದಾಖಲು

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಕಂದಾಯ ವಿಭಾಗದಲ್ಲಿ ನಕಲಿ ದಾಖಲೆಗಳನ್ನು ಬಳಸಿ ಅಕ್ರಮವಾಗಿ ಇ-ಖಾತಾ ಪಡೆಯುತ್ತಿರುವ ಕುರಿತಾಗಿ ಇಬ್ಬರು ಕಂದಾಯ ಅಧಿಕಾರಿಗಳು ಸೇರಿದಂತೆ ಖಾಸಗಿ ಬಿಲ್ಡರ್‍ಗಳು ಹಾಗೂ ಅರ್ಜಿದಾರರ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್‍ಗಳು ದಾಖಲಾಗಿವೆ.
ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು, ಕಂದಾಯ ಅಧಿಕಾರಿಗಳಾದ ಬಸವರಾಜ್ ಮಾಗಿ ಮತ್ತು ಲೋಕಮಾತಾ ಡಿ.ಎಸ್. ಸೇರಿ ಖಾಸಗಿ ಬಿಲ್ಡರ್‍ಗಳು ಹಾಗೂ ಅರ್ಜಿದಾರರ ವಿರುದ್ಧ ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಪ್ರಕರಣದಲ್ಲಿ 35 ಖಾತೆದಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‍ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಅಡಮಾನ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆಯಲ್ಲಿ ಇ-ಖಾತಾ ಸೃಷ್ಟಿಸಲು ‘ಇ-ಆಸ್ತಿ’ ತಂತ್ರಾಂಶದಲ್ಲಿ ಮಾಡ್ಯೂಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೆ, ಈ ಸೌಲಭ್ಯವನ್ನು ನಿಯಮಬಾಹಿರವಾಗಿ ಬಳಸಿಕೊಂಡು ಅರ್ಹತೆ ಇಲ್ಲದ ಹೊಸ ಫ್ಲ್ಯಾಟ್‍ಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.






