Bengaluru | ಸರಣಿ ಹತ್ಯೆ ಪ್ರಕರಣ: ಆಸ್ತಿ ಕಬಳಿಸಲು ಸ್ಟಾಂಪ್ ಪೇಪರ್ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದ ಆರೋಪಿ!

ಇಂದುಶೇಖರ್
ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್ ಶ್ರೀರಾಮಪುರದಲ್ಲಿರುವ ತನ್ನ ಪತ್ನಿ ಕುಟುಂಬದ ಕೋಟ್ಯಾಂತರ ಆಸ್ತಿ ಪಡೆಯಲು ಸಂಚು ರೂಪಿಸಿ, ಸ್ಟಾಂಪ್ ಪೇಪರ್ ಮೇಲೆ ಅವರ ಹೆಬ್ಬೆಟ್ಟು ಗುರುತು ಒತ್ತಿಸಿಕೊಂಡಿದ್ದನು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಹಾಗೂ ಆಕೆಗೆ ಬೆಂಬಲವಾಗಿ ನಿಂತಿದ್ದ ಸಂಬಂಧಿಕರು ಸೇರಿ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದನು. ಈ ಸಂಬಂಧ ರಾಜಾಜಿನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯು ತನ್ನ ಕುಟುಂಬಸ್ಥರ ಕೊಲೆಗೂ ಮುನ್ನವೇ ಶ್ರೀರಾಮಪುರದಲ್ಲಿರುವ ಪತ್ನಿ ಕುಟುಂಬದ ಕೋಟ್ಯಾಂತರ ಆಸ್ತಿ ಪಡೆಯಲು ಆರೋಪಿ ಸಂಚು ರೂಪಿಸಿ, ಸ್ಟಾಂಪ್ ಪೇಪರನ್ನು ಸಿದ್ಧಪಡಿಸಿಕೊಂಡಿದ್ದನು. ಒಬ್ಬೊಬ್ಬರನ್ನೇ ಕೊಲೆ ಮಾಡಿದ ಬಳಿಕ ಈ ಸ್ಟಾಂಪ್ ಪೇಪರ್ ಮೇಲೆ ಅವರ ಹೆಬ್ಬೆಟ್ಟು ಗುರುತು ಒತ್ತಿಸಿಕೊಂಡಿದ್ದಾನೆಂಬ ವಿಷಯ ವಿಚಾರಣೆ ವೇಳೆ ತಿಳಿದು ಬಂದಿದೆ.
ಇದರ ನಡುವೆ ಹೆಂಡತಿ ತನ್ನನ್ನು ಕೀಳಾಗಿ ನೋಡುತ್ತಿದ್ದಳು, ಬೈಯುತ್ತಿದ್ದಳು. ಕುಟುಂಬದವರೂ ಆಕೆಗೆ ಬೆಂಬಲ ನೀಡುತ್ತಿದ್ದರು. ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾಗಿಯೂ ಆರೋಪಿ ಹೇಳಿಕೆ ನೀಡಿದ್ದು, ತನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಬದಲಾಗಿ ಈಗ ಸಮಾಧಾನವಾಗುತ್ತಿದೆ ಎಂದು ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಶ್ರೀರಾಮಪುರದಲ್ಲಿರುವ ಪತ್ನಿಯ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವುದಾಗಿ ತಂದೆ ಭರವಸೆ ನೀಡಿದ್ದರಿಂದ ತಂದೆಗೆ ಸಹಕರಿಸಿದ್ದಾಗಿ ಆರೋಪಿಯ ಮಗಳು ಹೇಳಿಕೆ ನೀಡಿದ್ದಾಳೆ. ತಂದೆಯ ಕೊಲೆ ಯೋಜನೆ ತಿಳಿದಿದ್ದರೂ ಸುಮ್ಮನಿದ್ದ ಆಕೆ, ಕೊಲೆ, ಸಾಕ್ಷ್ಯ ನಾಶ ಹಾಗೂ ಮೃತದೇಹಗಳ ಸಾಗಾಟದಲ್ಲೂ ಆರೋಪಿಗೆ ನೆರವಾಗಿದ್ದಾಳೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.






