ಎಸ್‌ಐಆರ್ ಮತದಾರರ ಪಟ್ಟಿ ರದ್ದತಿ, ಎಂಎಸ್‌ಪಿ ಕಾನೂನು, ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಮಾನವ ಸರಪಳಿ

ಬೆಂಗಳೂರು : ಎಸ್‌ಐಆರ್ ಮತದಾರರ ಪಟ್ಟಿಯನ್ನು ರದ್ದುಗೊಳಿಸಿ, 2025ರ ಮತದಾರರ ಪಟ್ಟಿಯನ್ನು ಪುನಃಸ್ಥಾಪಿಸಬೇಕು, ಡಾ.ಸ್ವಾಮಿನಾಥನ್ ವರದಿಯಂತೆ ಸಿಎ+ಶೇ.50 ರಷ್ಟು ದರದಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ಸಂಯಕ್ತ ಹೋರಾಟ ಕರ್ನಾಟಕ ಹಾಗೂ ಎಸ್‌ಐಆರ್ ವಿರೋಧಿ ಒಕ್ಕೂಟದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯ, 2021ರ ಡಿ.9ರಂದು ಕೇಂದ್ರ ಸರಕಾರ ಲಿಖಿತವಾಗಿ ಒಪ್ಪಿಕೊಂಡಿದ್ದ ಭರವಸೆಗಳನ್ನು ಈವರೆಗೂ ಈಡೇರಿಸದೆ ಮಾತು ತಪ್ಪಿದೆ. ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ದೇಶದ ರೈತರಿಗೆ ಮಾರಕವಾಗಿರುವ ಎಲ್ಲ ವಿದೇಶಿ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಬಲವಂತದ ಭೂಸ್ವಾಧೀನ ಮತ್ತು ಕಾರ್ಪೊರೇಟ್ ಪರ ಭೂ ಪೂಲಿಂಗ್ ಕೈಬಿಡಬೇಕು. ಎಲ್‌ಎಆರ್‌ಆರ್ ಕಾಯ್ದೆ 2013, ಎಫ್‌ಆರ್‌ಎ 2006 ಹಾಗೂ ಪಿಇಎಸ್‌ಎ 1996 ಕಾಯ್ದೆಗಳ ಅಡಿಯಲ್ಲಿ ಭೂ ಹಕ್ಕುಗಳನ್ನು ರಕ್ಷಿಸಿ, ಬಳಕೆಯಾಗದ ಭೂಮಿಯನ್ನು ಮೂಲ ರೈತರಿಗೆ ಹಿಂದಿರುಗಿಸಬೇಕು ಎಂದು ಹೇಳಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಮತ್ತು ಎಲ್ಲ ಕಾರ್ಮಿಕರಿಗೆ ಕನಿಷ್ಠ 42 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ನೂರ್ ಶ್ರೀಧರ್, ಎಸ್‌ಐಆರ್ ಮುಹಮ್ಮದ್ ಯೂಸುಫ್ ಕನ್ನಿ, ಗೌರಮ್ಮ, ರವಿ ಮೋಹನ್, ಕುಮಾರ್ ಸಮತಳ, ತಾಹೇರ್ ಹುಸೇನ್, ಸರೋವರ್ ಬೆಂಕಿಕೆರೆ, ಖಲೀಲ್ ಉಲ್ಲಾ, ನಾಗೇಶ್ ಅರಳಕುಪ್ಪೆಸಹಿತ ಹಲವರು ಭಾಗವಹಿಸಿದ್ದರು.






