ಬೆಂಗಳೂರು: ಮಾರಕಾಸ್ತ್ರ ಹಿಡಿದು ಸೇಲ್ಸ್ ಮ್ಯಾನ್‍ಗಳನ್ನು ದೋಚುತ್ತಿದ್ದ ಗುಂಪು ಸೆರೆ

ಬೆಂಗಳೂರು: ಮಾರಕಾಸ್ತ್ರ ಹಿಡಿದು ಸೇಲ್ಸ್ ಮ್ಯಾನ್‍ಗಳನ್ನು ದೋಚುತ್ತಿದ್ದ ಗುಂಪೊಂದನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಅಕ್ಕಲ್, ವಸೀಂ, ಬಕಾಸ್, ಅಜರ್, ಮತ್ತು ಅಲಿ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದಾನೆ.
ಪ್ರಮುಖ ಆರೋಪಿ ಸಮೀರ್, ತನಗೆ ಹಣ ಬೇಕಾದಾಗ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುವ ಸೇಲ್ಸ್ ಮ್ಯಾನ್‍ಗಳನ್ನು ಗುರುತಿಸಿಕೊಂಡು ಉಳಿದ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದನು. ಮಾರಕಾಸ್ತ್ರಗಳ ಸಮೇತ ಸಮೀರ್ ಕೊಟ್ಟ ಟಾರ್ಗೆಟ್ ತಲುಪುತ್ತಿದ್ದ ಆರೋಪಿಗಳು, ಸಿಗರೇಟು ಮತ್ತಿತರ ಅಂಗಡಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಬಳಿಕ ಆ ಸಾಮಗ್ರಿಗಳನ್ನು ವಿಲೇವಾರಿ ಮಾಡುತ್ತಿದ್ದ ಸಮೀರ್, ಉಳಿದ ಆರೋಪಿಗಳಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದ.
ಇದೇ ರೀತಿ ಇತ್ತೀಚಿಗೆ ಯಲಹಂಕದ ಕೊಂಡಪ್ಪ ಲೇಔಟ್ ಬಳಿಯಿರುವ ಶಿವಚೇತನ ಪ್ರಾವಿಷನ್ ಸ್ಟೋರ್ ಬಳಿ ಶಾಂತಿ ಪ್ರಸಾದ್ ಎಂಬ ಸೇಲ್ಸ್ ಮ್ಯಾನ್ ಅನ್ನು ಬೆದರಿಸಿದ್ದ ಆರೋಪಿಗಳು ಸುಮಾರು 66 ಸಾವಿರ ರೂ. ಮೌಲ್ಯದ ಸಿಗರೇಟುಗಳನ್ನು ದೋಚಿದ್ದರು. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಅಕ್ಕಲ್ ನಾಲ್ಕು ಕೊಲೆ ಯತ್ನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳು ಈ ಹಿಂದೆ ಜೈಲುವಾಸ ಅನುಭವಿಸಿ ಹೊರ ಬಂದರೂ ಮತ್ತದೇ ಕೃತ್ಯ ಎಸಗುತ್ತಿದ್ದು, ರೌಡಿ ಶೀಟ್ ತೆರೆಯಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳಿಂದ 2 ಲಕ್ಷ ಮೌಲ್ಯದ ಸಿಗರೇಟ್, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಸಮೀರ್ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







