ಬೆಂಗಳೂರು | ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿ; ವಿದ್ಯಾರ್ಥಿನಿ ಮೃತ್ಯು

ಧನುಶ್ರೀ(22)
ಬೆಂಗಳೂರು, ಸೆ.29 : ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ನಗರದ ಬೂದಿಗೆರೆ ಕ್ರಾಸ್ ಬಳಿ ನಡೆದಿದೆ.
ಸೆ.29ರ ಸೋಮವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಟಿಪ್ಪರ್ ಲಾರಿ ಹರಿದ ಪರಿಣಾಮ ಧನುಶ್ರೀ(22) ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದರು. ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದ ಧನುಶ್ರೀ, ದ್ವಿಚಕ್ರ ವಾಹನದಲ್ಲಿ ಸೋಮವಾರ ಬೆಳಗ್ಗೆ ಕಾಲೇಜಿನತ್ತ ತೆರಳುತ್ತಿದ್ದರು.
ಬೂದಿಗೆರೆ ಕ್ರಾಸ್ ಬಳಿ ಸಾಗುವಾಗ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಯತ್ನಿಸಿದ ಧನುಶ್ರೀಯ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿಯಾಗಿತ್ತು. ಈ ವೇಳೆ ನೆಲಕ್ಕೆ ಬಿದ್ದಾಗ ಆಕೆಯ ದೇಹದ ಮೇಲೆ ಟಿಪ್ಪರ್ ಹರಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಧನುಶ್ರೀಯ ತಾಯಿ ನೀಡಿರುವ ದೂರಿನನ್ವಯ ಅವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







