Bengaluru | ಬಿಎಂಟಿಸಿ ಬಸ್ನಿಂದ ಎರಡು ಕಡೆಗಳಲ್ಲಿ ಅಪಘಾತ; ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜಧಾನಿಯಲ್ಲಿ ಬಿಎಂಟಿಸಿ ಬಸ್ಗಳಿಂದ ಆಗುತ್ತಿರುವ ಅವಾಂತರ ಮುಂದುವರೆದಿದ್ದು, ಗುರುವಾರ ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ನಗರದ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್, ಆತನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವೆಂಕಟರಾಮಯ್ಯ(63) ಸಾವನ್ನಪ್ಪಿದ ವೃದ್ಧ ಎಂದು ಗುರುತಿಸಲಾಗಿದೆ. ಇವರು ಬೊಮ್ಮನಹಳ್ಳಿಯ ರೂಪೇನಾ ಅಗ್ರಹಾರ ನಿವಾಸಿಯಾಗಿದ್ದಾರೆ. ಸೊಪ್ಪು-ತರಕಾರಿ ವ್ಯಾಪಾರ ಮಾಡುತ್ತಿದ್ದ ವೆಂಕಟರಾಮಯ್ಯ ಮಡಿವಾಳ ಮಾರ್ಕೆಟ್ಗೆ ಸೊಪ್ಪು ಖರೀದಿಸಲು ಬಂದಿದ್ದರು.
ವ್ಯಾಪಾರ ಮುಗಿಸಿಕೊಂಡು ಬೆಳಗ್ಗೆ 6.30ರ ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಬಸ್ ಮುಂದೆ ಹೋಗುತ್ತಿದ್ದ ಟಾಟಾಏಸ್ ವಾಹನಕ್ಕೆ ಗುದ್ದಿದ ಬಳಿಕ ವೆಂಕಟರಾಮಯ್ಯ ಅವರಿಗೆ ಢಿಕ್ಕಿ ಹೊಡೆದಿದೆ. ಬಸ್ನ ಚಕ್ರ ವೆಂಕಟರಾಮಯ್ಯ ಮೇಲೆ ಹರಿದ ಪರಿಣಾಮ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಗರದ ಸೈಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದೆಡೆ, ಗೋವಿಂದರಾಜನಗರದ ಸರ್ವಜ್ಞ ಪಬ್ಲಿಕ್ ಶಾಲೆ ಬಳಿ ವೃದ್ಧೆ ಮೇಲೆ ಬಿಎಂಟಿಸಿ ಹರಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ. ಸುಶೀಲಾ(61) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ಬಸ್ನಿಂದ ಇಳಿದು ಬಲಭಾಗದ ರಸ್ತೆ ದಾಟುವಾಗ ಆಯತಪ್ಪಿ ಬಿದ್ದ ಪರಿಣಾಮ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಸ್ಗೆ ಸಿಲುಕಿದ್ದಾರೆ. ಬಸ್ ಚಕ್ರ ವೃದ್ಧೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.







