Bengaluru | ಬೈಕ್ಗೆ ಕಾರು ಢಿಕ್ಕಿ; ಮಹಿಳೆ ಮೃತ್ಯು

ಬೆಂಗಳೂರು : ಅತಿ ವೇಗವಾಗಿ ಬಂದ ಕಾರು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಗೌರಿಬಿದನೂರು ಮೂಲದ ಗಾಯತ್ರಿ(42) ಎಂದು ಗುರುತಿಸಲಾಗಿದೆ. ಇವರು ಯಲಹಂಕ ಓಲ್ಡ್ ಟೌನ್ನಲ್ಲಿ ವಾಸಿಸುತ್ತಿದ್ದು, ಮನೆಕೆಲಸ ಮಾಡಿಕೊಂಡಿದ್ದರು. ಪತಿ ನರಸಾರೆಡ್ಡಿ ಮತ್ತು ನಾಲ್ಕು ವರ್ಷದ ಮಗಳು ಹಾರಿಕಾ ರೆಡ್ಡಿ ಅವರ ಜೊತೆ ಗಾಯತ್ರಿ ಜಕ್ಕೂರು ಲೇಔಟ್ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಮನೆಗೆ ಬೈಕ್ ನಲ್ಲಿ ಬರುತ್ತಿದ್ದರು.
ರಾತ್ರಿ 11 ಗಂಟೆ ಸಮಯದಲ್ಲಿ ಬೈಕ್ ಬಿಬಿ ರಸ್ತೆಯ ಜಕ್ಕೂರು ಏರೋಡೋಮ್ ಹತ್ತಿರ ಚಲಿಸುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರೊಂದು ಢಿಕ್ಕಿಯಾದ ಪರಿಣಾಮ ಮೂವರು ಕೆಳಗೆ ಬಿದ್ದರು. ಮೂವರನ್ನು ಸ್ಥಳೀಯರು ಆಟೊ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಹೆಚ್ಚಿನ ಚಿಕಿತ್ಸೆಗಾಗಿ ಗಾಯತ್ರಿ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಗಾಯತ್ರಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಸಂಚಾರಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ






