ಬೆಂಗಳೂರು | AI ಕ್ಯಾಮೆರಾ ಎಡವಟ್ಟು : ಗಿಟಾರ್ ಗೆ ಸಂಚಾರ ನಿಯಮ ಉಲ್ಲಂಘನೆ ದಂಡ !

ಬೆಂಗಳೂರು, ಸೆ.26: ರಾಜಧಾನಿ ಬೆಂಗಳೂರಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ AI ಕ್ಯಾಮೆರಾಗಳು ಸ್ವತಃ ಪತ್ತೆಹಚ್ಚಿ ದಂಡ ವಿಧಿಸುತ್ತವೆ. ಆದರೆ ಇದೇ AI ಕ್ಯಾಮೆರಾ ಎಡವಟ್ಟೊಂದು ಮಾಡಿದ್ದು, ಬೈಕ್ ನ ಹಿಂಬದಿ ಇದ್ದ ಗಿಟಾರ್ ಗೆ 'ಹೆಲ್ಮೆಟ್ ಇಲ್ಲ' ಎಂಬ ಕಾರಣಕ್ಕೆ 500 ರೂ ದಂಡ ಹಾಕಿದೆ.
ಸೋವಿಕ್ ದತ್ತಾ ಎಂಬವರು ಸೆ.15ರಂದು ಬೆನ್ನ ಹಿಂದೆ ಗಿಟಾರ್ ಇಟ್ಟುಕೊಂಡು ತನ್ನ ಬೈಕ್ ನಲ್ಲಿ ಹೆಬ್ಬಾಳ ಕಡೆಯಿಂದ ಟಿನ್ ಫ್ಯಾಕ್ಟರಿ ಕಡೆ ಸಂಚರಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಗೆ ಸಂಬಂಧಿಸಿದ AI ಕ್ಯಾಮೆರಾ ಗಿಟಾರ್ ನ್ನು ಸಹಸವಾರ ಎಂದು ತಪ್ಪಾಗಿ ಗ್ರಹಿಸಿ 500 ರೂ. ದಂಡ ವಿಧಿಸಿ ಚಲನ್ ಜನರೇಟ್ ಮಾಡಿದೆ.
ಸಂಚಾರ ನಿಯಮ ಉಲ್ಲಂಘನೆಯ ಸಂದೇಶ ಸೋವಿಕ್ ದತ್ತಾ ಪತ್ನಿಯ ಮೊಬೈಲ್ ಗೆ ಬಂದಿದೆ. ಈ ಬಗ್ಗೆ ಅವರು ಬೆಂಗಳೂರು ಸಂಚಾರ ಪೊಲೀಸರ ವೆಬ್ ಸೈಟ್ ನಲ್ಲಿ ಪರಿಶೀಲಿಸಿದಾಗ ಪೋಟೊ ಲಭ್ಯವಾಗಿದೆ. ಸದ್ಯ AI ಕ್ಯಾಮೆರಾದ ಈ ಎಡವಟ್ಟು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಪೊಲೀಸರು ಏನು ಕ್ರಮ ತೆಗೆದುಕೊಳ್ತಾರೆ ಅನ್ನುವುದು ಕಾದು ನೋಡಬೇಕಿದೆ.






