Bengaluru | ಬಂಜಾರ ಸಮುದಾಯದ ಸಭೆಯಲ್ಲಿ ವಾಗ್ವಾದ
ಬೆಂಗಳೂರು : ನಗರದಲ್ಲಿ ಬಂಜಾರ ಸಮುದಾಯದ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ರುದ್ರಪ್ಪ ಲಮಾಣಿ ಅವರು ಕರೆದಿದ್ದ ಸಭೆಯಲ್ಲಿ, ವಾಗ್ವಾದ ಉಂಟಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಬಂಜಾರ ಸಮುದಾಯದ ಮುಖಂಡರು ಹಲವು ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದು, ಸಚಿವರ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಂಜಾರ ಸಮುದಾಯದ ಹೆಸರಿನಲ್ಲಿ ಕೇವಲ ಅಧಿಕಾರ ಮತ್ತು ಸ್ಥಾನಮಾನಗಳಿಗೆ ಆದ್ಯತೆ ನೀಡದೆ, ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸ್ಪಷ್ಟ ಯೋಜನೆಗಳನ್ನು ರೂಪಿಸಬೇಕು. ಸೂರಗೊಂಡನಕೊಪ್ಪದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅದೇ ಮಾದರಿಯಲ್ಲಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿರುವ ಬಂಜಾರ ಸಮುದಾಯದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಬಂಜಾರ ಸಮುದಾಯದ ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ಬಂಜಾರ ಮುಖಂಡರಾದ ಡಾ.ಗೋವಿಂದಸ್ವಾಮಿ, ಲಿಂಬ್ಯಾನಾಯ್ಕ, ರೇಷ್ಮಾ, ವಿಠ್ಠಲ್ ಜಾದವ್, ಡಿ.ರಾಮಾನಾಯ್ಕ, ಮಹೇಶ್, ಶಾಂತರಾಜು, ಅನಂತನಾಯ್ಕ ಮತ್ತಿತರರು ಹಾಜರಿದ್ದರು.




