ಬೆಂಗಳೂರು | ಯುವಕನ ಕೈಕಾಲು ಕಟ್ಟಿ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಬೆಂಗಳೂರು: ಯುವಕನೋರ್ವನನ್ನು ಕೈಕಾಲು ಕಟ್ಟಿ ಬೆಂಕಿ ಹಚ್ಚಿ ಕೊಲೆಗೈಯಲು ಯತ್ನಿಸಿರುವ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿರುವುದು ವರದಿಯಾಗಿದೆ.
ಗಾಯಾಳುವನ್ನು ಮುಹಮ್ಮದ್ ಎಂದು ಗುರುತಿಸಲಾಗಿದೆ. ತೀವ್ರ ಸುಟ್ಟ ಗಾಯಗಳಾಗಿರುವ ಮುಹಮ್ಮದ್ ರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದೆ.
ಮುಹಮ್ಮದ್ ಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಚಿಂದಿ ಆಯುವ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಮಂಗಳವಾರ ಯಾರೋ ದುಷ್ಕರ್ಮಿಗಳು ಮುಹಮ್ಮದ್ ಕೈಕಾಲುಗಳನ್ನು ಕಟ್ಟಿ ಬೆಂಕಿ ಹಚ್ಚಿದ್ದಾರೆ. ಇದನ್ನು ಗಮನಿಸಿದ ಸ್ಥಳಿಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಹಮ್ಮದ್ ನನ್ನು ರಕ್ಷಿಸಿರುವ ಪೊಲೀಸರು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರಿಗೆ ದೇಹದಾದ್ಯಂತ ಸುಟ್ಟ ಗಾಯಗಳಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಚಿಂದಿ ಆಯುವ ಏರಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಹಾಗೂ ಇತರ ಚಿಂದಿ ಆಯುವವರ ನಡುವೆ ಜಗಳ ನಡೆದಿದೆ. ಇದೇ ಕಾರಣಕ್ಕೆ ಮುಹಮ್ಮದ್ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




