ಬೆಂಗಳೂರು: ಆಟೋ ಚಾಲಕನ ಹತ್ಯೆ: ಹಳೆ ವೈಷಮ್ಯ ಶಂಕೆ

ಬೆಂಗಳೂರು, ಡಿ.6: ಹಳೇ ವೈಷಮ್ಯಕ್ಕೆ ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಂಬರ್ ಲೇಔಟ್‍ನಲ್ಲಿ ವರದಿಯಾಗಿದೆ.
ಅರುಣ್(24) ಕೊಲೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಡಿ.5ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕೆಲಸ ಮುಗಿಸಿಕೊಂಡು ಬಂದಿದ್ದ ಅರುಣ್ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ಗುಂಪು ಬಂದು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಸುಮಾರು ಏಳೆಂಟು ಮಂದಿ ಈ ಕೃತ್ಯವೆಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಚಾಲಕ ಅರುಣ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಹಳೆ ದ್ವೇಷದಿಂದ ಆರೋಪಿಗಳು ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





