ಬೆಂಗಳೂರು | ಮೆಟ್ರೋ ಕಾಮಗಾರಿಗೆ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ತಡೆಗೋಡೆ ಉರುಳಿ ಬಿದ್ದು ಆಟೋ ಚಾಲಕ ಮೃತ್ಯು

ಬೆಂಗಳೂರು,: ಮೆಟ್ರೋ ಕಾಮಗಾರಿ ವೇಳೆಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ವಯಾಡಕ್ಟ್(ಬೃಹತ್ ತಡೆಗೋಡೆ) ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎ.15ರ (ಮಂಗಳವಾರ) ತಡರಾತ್ರಿ 12ಗಂಟೆ ಸುಮಾರಿಗೆ ನಗರದ ಕೋಗಿಲು ಕ್ರಾಸ್ ಬಳಿ ಸಂಭವಿಸಿದೆ.
ಖಾಸಿಂ ಸಾಬ್(35) ಎಂಬಾತ ಮೃತಪಟ್ಟ ಆಟೋ ಚಾಲಕ ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎ.15ರ ರಾತ್ರಿ ಏರ್‌ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗೆ ಬಳಸಲು ವಯಾಡಕ್ಟ್ ಕೊಂಡೊಯ್ಯುತ್ತಿದ್ದ ಲಾರಿ ತಿರುವು ಪಡೆಯುವಾಗ ಅವಘಡ ಸಂಭವಿಸಿದೆ. ಅವಘಡದ ಮುನ್ಸೂಚನೆ ಅರಿತ ಪ್ರಯಾಣಿಕ ತಕ್ಷಣ ಆಟೋದಿಂದ ಇಳಿದಿದ್ದಾರೆ. ಆದರೆ, ಖಾಸೀಂ ಸಾಬ್ ಇಳಿಯುವಷ್ಟರಲ್ಲಿ ವಯಾಡೆಕ್ಟ್ ಉರುಳಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿಡ್ಲಘಟ್ಟ ಮೂಲದ ಖಾಸೀಂ ಸಾಬ್ ಕುಟುಂಬ ಬೆಂಗಳೂರಿನಲ್ಲಿ ವಾಸವಿತ್ತು ಎಂದು ಸಹ ಚಾಲಕರು ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆದ ಎರಡು ಗಂಟೆಗಳ ಬಳಿಕ ಕ್ರೇನ್ ತರಿಸಿ ವಯಾಡಕ್ಟ್ ತೆರವುಗೊಳಿಸಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ರಸ್ತೆಯಲ್ಲಿ ಸಂಚಾರ ನಿರ್ಬಂಧಿಸದೇ, ಭದ್ರತಾ ಕ್ರಮಗಳು ಇಲ್ಲದಿರುವುದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.