Bengaluru | ಬಾಗಲೂರು ಶೂಟೌಟ್ ಪ್ರಕರಣ : ಇಬ್ಬರ ಬಂಧನ

ಇಮ್ರಾಜ್, ನವೀದ್
ಬೆಂಗಳೂರು: ಬಾಗಲೂರು ಸಮೀಪದ ಖಾಸಗಿ ಲೇಔಟ್ನಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಬಾಗಲೂರು ಪೊಲೀಸರು ಭೇದಿಸಿದ್ದು, ಗುಜರಿ ವ್ಯಾಪಾರದ ಪಾರುಪತ್ಯಕ್ಕಾಗಿ ಈ ಕೊಲೆ ನಡೆದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಎರಡು ದಿನಗಳ ಹಿಂದೆ ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿರುವ ಖಾಸಗಿ ಲೇಔಟ್ನಲ್ಲಿ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಾಗಲೂರು ಪೊಲೀಸರು, ಮೃತ ವ್ಯಕ್ತಿ ಬನ್ನೇರುಘಟ್ಟ ಮೂಲದ ಇಮ್ರಾಜ್ ಪಾಷಾ ಎಂಬುದನ್ನು ಪತ್ತೆಹಚ್ಚಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನವೀದ್ ಇಲಾಹಿ ಬೇಗ್ ಹಾಗೂ ಮುಬಾರಕ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೀದ್ ಗಂಗೊಂಡನಹಳ್ಳಿಯಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ. ಇಮ್ರಾಜ್ ಪಾಷಾ ಮೈಸೂರು ರಸ್ತೆ ಹಾಗೂ ಬ್ಯಾಟರಾಯನಪುರ ಭಾಗದಲ್ಲಿ ಗುಜರಿ ವ್ಯಾಪಾರ ಆರಂಭಿಸಲು ಮುಂದಾಗಿದ್ದರು. ಇದಕ್ಕೆ ನವೀದ್ ವಿರೋಧ ವ್ಯಕ್ತಪಡಿಸಿ, ಎಚ್ಚರಿಕೆಯನ್ನೂ ನೀಡಿದ್ದ ಎನ್ನಲಾಗಿದೆ.
ಆದರೆ ನವೀದ್ನ ಎಚ್ಚರಿಕೆಗೆ ಇಮ್ರಾಜ್ ಒಪ್ಪದ ಹಿನ್ನೆಲೆಯಲ್ಲಿ, ಸಂಧಾನದ ಮಾತುಕತೆ ನಡೆಸುವ ನೆಪದಲ್ಲಿ ಆತನನ್ನು ಕರೆಸಿಕೊಳ್ಳಲಾಗಿದೆ. ಬಳಿಕ ಮುಬಾರಕ್ನ ಸಹಾಯ ಪಡೆದು ಇಮ್ರಾಜ್ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.






