Bengaluru | ಬಸ್ ಪ್ರಯಾಣದರ ಏರಿಕೆ ಖಂಡಿಸಿ ಭಿಕ್ಷಾಪಾತ್ರೆ ಹಿಡಿದು ಬಿಜೆಪಿ ಪ್ರತಿಭಟನೆ

ಬೆಂಗಳೂರು: ಬಸ್ ಪ್ರಯಾಣದರ ಏರಿಕೆಯನ್ನು ಖಂಡಿಸಿ ನಗರದ ಮೆಜೆಸ್ಟಿಕ್ ನಲ್ಲಿ ಇಂದು ಬಿಜೆಪಿ ವತಿಯಿಂದ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಇದು ದುಷ್ಟ ಮತ್ತು ಲೂಟಿ ಸರಕಾರ ಎಂದು ಟೀಕಿಸಿದ್ದಾರೆ.
ಸರಕಾರವು ಗ್ಯಾರಂಟಿ ಸಂಬಂಧ ಸುಮಾರು ಐದಾರು ಸಾವಿರ ಕೋಟಿ ರೂ. ಕೊಡಬೇಕು. ಆ ಫ್ರೀ ಗ್ಯಾರಂಟಿಯಿಂದ ಹಣ ಕೊಡುವ ಯೋಗ್ಯತೆ ಇಲ್ಲದೆ ಜನರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಸ್ಕೀಮ್ ಗೆ ಅವರಿಗೆ ಒಂದು ಪೈಸಾ ಕ್ರೋಡೀಕರಣ ಮಾಡಲು ಆಗುತ್ತಿಲ್ಲ. ಜನರ ಮೇಲೆ ಅದನ್ನ ತೆರಿಗೆ ರೂಪದಲ್ಲಿ ಹಾಕುವ ದುಷ್ಟ ಸರ್ಕಾರ ಇದು ಎಂದು ಟೀಕಿಸಿದರು.
ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಸರ್ಕಾರ ಬಂದಮೇಲೆ ಪೆಟ್ರೋಲ್ ಮತ್ತು ಡೀಸೆಲ್ ನಿಂದಾನೇ ಐದರಿಂದ ಆರು ಸಾವಿರ ಕೋಟಿ ರೂ. ಇವರ ಖಜಾನೆಗೆ ಬಂದಿದೆ. ಇದನ್ನ ವಾಪಸ್ ಕೊಡಿ. ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆ ಅಂತೀರಲ್ಲ, ಅದರಿಂದ ಹಣ ಬಂದಿದೆಯಲ್ಲ ವಾಪಸ್ ಕೊಡಿ ಎಂದು ಒತ್ತಾಯಿಸಿದರು.
ಹಾಲು, ಮೊಸರು, ತುಪ್ಪದ ದರ ಏರಿಸಿದ್ದಾರೆ. ಜನಸಾಮಾನ್ಯ ಏನು ಮಾಡಬೇಕು ಎಂದು ಪ್ರಶ್ನಿಸಿದ ಅಶೋಕ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆಯನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಇವತ್ತು ಬಸ್ಗಳಿಗೆ ಟೈರ್ ಇಲ್ಲ, ಟ್ಯೂಬ್ ಇಲ್ಲ, ಹ್ಯಾಂಡಲ್ ಇಲ್ಲ, ಸ್ಟೇರಿಂಗ್ ಇಲ್ಲ, ಬ್ಯಾಟರಿ ಇಲ್ಲ. ಓಡೋದೇ ಇಲ್ಲ, ತಳ್ಳೋ ಬಸ್ ಗಳು ಇವೆ ಎಂದು ಟೀಕಿಸಿದರು.






