Bengaluru | ಹೂತಿಟ್ಟ 47 ದಿನಗಳ ನಂತರ ವ್ಯಕ್ತಿಯ ಮೃತದೇಹ ಹೊರತೆಗೆದು ಮರು ತನಿಖೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಹೂತಿಟ್ಟ 47 ದಿನಗಳ ನಂತರ ಮೃತದೇಹ ಹೊರತೆಗೆದು ಮರು ತನಿಖೆ ನಡೆಸಿರುವ ಪ್ರಕರಣ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ.
ಯೂನೆಸ್ ಎಂಬುವರು ತಮ್ಮ ಸಹೋದರ ಇಮ್ತಿಯಾಝ್(40) ಎಂಬುವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.28ರಂದು ಇಮ್ತಿಯಾಝ್ ಎಂಬುವರು ಮನೆಯಲ್ಲಿ ಮೃತಪಟ್ಟಿದ್ದರು. ಈತನ ಪತ್ನಿ ನಸೀರಾಭಾನು, ತನ್ನ ಪತಿ ಇಮ್ತಿಯಾಝ್ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರಿಗೆ ಹೇಳಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದರು ಎನ್ನಲಾಗಿದೆ. ಆದರೆ, ಇಮ್ತಿಯಾಝ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆತನ ಸಹೋದರ ಯೂನೆಸ್, ಸಹೋದರನ ಪತ್ನಿಯಾದ ನಸೀರಾಭಾನು ಮತ್ತು ಆತನ ಸ್ನೇಹಿತನ ವಿರುದ್ಧ ದೂರು ನೀಡಿದ್ದರು.
ಈ ಬಗ್ಗೆ ತಹಶೀಲ್ದಾರ್ ಆದೇಶದ ಮೇರೆಗೆ ಹೂತಿಟ್ಟ 47 ದಿನಗಳ ನಂತರ ಮೃತದೇಹ ಹೊರತೆಗೆದಿರುವ ಎಚ್ಎಎಲ್ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ಮರು ತನಿಖೆ ನಡೆಸಿರುವುದಾಗಿ ತಿಳಿಸಿದ್ದಾರೆ.




