ಬೆಂಗಳೂರು| ಬಸ್ನೊಳಗೆ ಸುಟ್ಟು ಕರಕಲಾದ ಮೃತದೇಹ ಪತ್ತೆ!

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.13: ರಸ್ತೆ ಬದಿ ನಿಲ್ಲಿಸಲಾಗಿದ್ದ ಬಸ್ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಒಳಭಾಗದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾದ ಘಟನೆ ಇಲ್ಲಿನ ಬಾಣಸವಾಡಿಯ ಒಎಂಬಿಆರ್ ಲೇಔಟ್ನಲ್ಲಿ ನಡೆದಿದೆ.
ಆ.13ರ ಮಂಗಳವಾರ ರಾತ್ರಿ 10:45ರ ಸುಮಾರಿಗೆ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದಾಗ ಬಸ್ನೊಳಗೆ ಸುಟ್ಟ ಸ್ಥಿತಿಯಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಸ್ ಅನ್ನು ಮಾರಾಟ ಮಾಡಲು ತಂದಿದ್ದ ಮಾಲಕ ಮನೆಯ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದರು. ಆದರೆ, ಕೆಲವು ದಿನಗಳಿಂದ ರಾತ್ರಿ ಸಂದರ್ಭದಲ್ಲಿ ಕೆಲ ಯುವಕರು ಬಸ್ವೊಳಗೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಡೋರ್ ಲಾಕ್ ಮಾಡಿದರೂ ಸಹ ಬಸ್ನೊಳಗೆ ಹೋಗಿ ಕುಳಿತುಕೊಳ್ಳುತ್ತಿದ್ದ ಯುವಕರು ಗಲಾಟೆ ಮಾಡಿಕೊಂಡು ತಮ್ಮಲ್ಲೇ ಯಾರನ್ನಾದರೂ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಮೃತನ ಗುರುತು ಪತ್ತೆ ಆಗದಿರುವುದರಿಂದ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ರಾಮಮೂರ್ತಿನಗರ ಪೊಲೀಸರು ಮಾಹಿತಿ ನೀಡಿದ್ದಾರೆ.







