BENGALURU | ಸೈಬರ್ ವಂಚಕರ ಪಾಲಾಗಿದ್ದ 2.16 ಕೋಟಿ ರೂ. ‘ಗೋಲ್ಡನ್ ಅವರ್'ನಲ್ಲಿ ಹಿಂಪಡೆದ ಸಿಸಿಬಿ ಪೊಲೀಸರು

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.20: ಇ-ಮೇಲ್ ಸ್ಪೂಫಿಂಗ್ ಮೂಲಕ ವಂಚಕರ ಖಾತೆಗೆ ಸೇರಿದ್ದ 2.16 ಕೋಟಿ ರೂ. ವನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು 'ಗೋಲ್ಡನ್ ಅವರ್'ನಲ್ಲಿ ತ್ವರಿತ ಕಾರ್ಯಾಚರಣೆ ಮೂಲಕ ಹಿಂಪಡೆದು ವಾರಸುದಾರರಿಗೆ ಹಿಂದಿರುಗಿಸಿದ ಘಟನೆ ನಡೆದಿದೆ. ಇಷ್ಟೊಂದು ದೊಡ್ಡ ಮೊತ್ತದ ರಿಕವರಿ ದೇಶದಲ್ಲೇ ಇದು ಮೊದಲು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ರೂಪ್ ಫಾರ್ಮಾ ಹೆಸರಿನ ಕಂಪೆನಿಯೊಂದು ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪೆನಿಯಾದ ರೆಡ್ಡೀಸ್ ಲ್ಯಾಬೋರೇಟರೀಸ್ ಜೊತೆ ವ್ಯವಹಾರ ಹೊಂದಿತ್ತು. ಈ ಮಧ್ಯೆ ಆನ್ ಲೈನ್ ವಂಚಕರು ನೈಜೀರಿಯಾದಲ್ಲಿ ಕುಳಿತು 2025ರ ಫೆಬ್ರವರಿಯಲ್ಲಿ ಗ್ರೂಪ್ ಫಾರ್ಮಾ ಕಂಪೆನಿಯ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದು ಈ ವಂಚನೆ ಎಸಗಿದ್ದಾರೆ, ವಂಚಕರು ರೆಡ್ಡೀಸ್ ಲ್ಯಾಬೋರೇಟರೀಸ್ ಜೊತೆ ಸಂಪರ್ಕ ಸಾಧಿಸಿದ್ದರು. ಅಸಲಿ ಇ-ಮೇಲ್ ಐಡಿಯಿಂದ ಬಂದಿರಬಹುದು ಎಂದು ನಂಬಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್, ಆರೋಪಿಗಳು ಸೂಚಿಸಿದ್ದ ಖಾತೆಗೆ 2.16 ಕೋಟಿ ರೂ. ಪಾವತಿಸಿದ್ದರು. ಆದರೆ, ಆ ಹಣ ನಕಲಿ ಬ್ಯಾಂಕ್ ಖಾತೆಗೆ ಜಮೆಯಾಗಿರುವುದು ಬಳಿಕ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಗ್ರೂಪ್ ಫಾರ್ಮಾದ ಪ್ರತಿನಿಧಿಗಳು ತಕ್ಷಣ ಸಿಸಿಬಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಗೋಲ್ಡನ್ ಅವರ್ ಆಗಿರುವುದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ಸಂದಾಯವಾಗಿದ್ದ ಗುಜರಾತ್ ಮೂಲದ ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಸದ್ಯ ಸಂಪೂರ್ಣವಾಗಿ 2.16 ಕೋಟಿ ರೂ.ವನ್ನು ಅದರ ವಾರಸುದಾರರಿಗೆ ಹಿಂದಿರುಗಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಏನಿದು ಗೋಲ್ಡನ್ ಅವರ್?
ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಸೆಮ್ಮೆಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಈ ರೀತಿ ವಂಚನೆಗೊಳಗಾದ ಒಂದು ಗಂಟೆಯ ಅವಧಿಯನ್ನು ‘ಗೋಲ್ಡನ್ ಅವರ್' ಎನ್ನಲಾಗುತ್ತದೆ. ಈ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ಪತ್ತೆ ಹಚ್ಚಿ ಅದರಲ್ಲಿರುವ ಹಣವನ್ನು ತಡೆಹಿಡಿಯುವ ಅವಕಾಶ ಹೆಚ್ಚಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







