Bengaluru | 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆದ ಸಿಸಿಬಿ: ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬಾಗಲೂರಿನಲ್ಲಿ ವರದಿಯಾಗಿದೆ.
ಮಾ.2ರಂದು ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್ನ ಫ್ಲಾಟ್ವೊಂದರಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ (ಎಲ್ಎಸ್ಡಿ, ಹೈಡ್ರೋ ಗಾಂಜಾ, ಚರಸ್) ಜಪ್ತಿ ಮಾಡಿದ್ದು, ಜೊತೆಗೆ ಕೇರಳ ಮೂಲದ ಅಶ್ವಿನ್(27) ಹಾಗೂ ಮೊಬಿನಾ(25) ಎಂಬ ಇಬ್ಬರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳು, ಥೈಲ್ಯಾಂಡ್ ಮೂಲದ ವಿನ್ಸೆಂಟ್ ಎಂಬಾತ ಆಗಾಗ್ಗೆ ಕಳುಹಿಸಿ ಕೊಡುತ್ತಿದ್ದ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿದ್ದರು. ವಿಮಾನದ ಮೂಲಕ ಕಳುಹಿಸಿದ ಡ್ರಗ್ಸ್ ಅನ್ನು ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಹಾಗೂ ಮೊಬಿನಾ ಇಡುತ್ತಿದ್ದರು ಎನ್ನಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 8,335 ಎಲ್ಎಸ್ಡಿ ಸ್ಕ್ರಿಪ್ಸ್ ಜಪ್ತಿ ಮಾಡಲಾಗಿದ್ದು, ಒಂದು ಎಲ್ಎಸ್ಡಿ ಸ್ಕ್ರಿಪ್ಸ್ ಬೆಲೆ 6 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ ಎಲ್ಎಸ್ಡಿ ಸ್ಕ್ರಿಪ್ಸ್ ಮಾರಾಟ ಮಾಡಲಾಗುತ್ತಿತ್ತು. ಜತೆಗೆ ಚರಸ್ 534 ಗ್ರಾಂ, 5 ಕೆ.ಜಿ. ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿದುಬಂದಿದೆ.
ಸದ್ಯ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.






