ಬೆಂಗಳೂರು | ಮಗು ಅಪಹರಣ: 24 ಗಂಟೆಯೊಳಗೆ ಪ್ರಕರಣ ಬೇಧಿಸಿದ ಪೊಲೀಸರು!
ಬಟ್ಟೆಯ ವಾಸನೆ ಹಿಡಿದು ಮಗುವಿನ ಪತ್ತೆಗೆ ನೆರವು ನೀಡಿದ ಶ್ವಾನದಳ

ಸಾಂದರ್ಭಿಕ ಚಿತ್ರ | PC : grok
ಬೆಂಗಳೂರು : ಐದು ವರ್ಷದ ಹೆಣ್ಣು ಮಗುವೊಂದನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಪ್ರಕರಣ ನಡೆದ 24 ಗಂಟೆಯೊಳಗೆ ಇಲ್ಲಿನ ಜ್ಞಾನಭಾರತಿ ಠಾಣಾ ಪೊಲೀಸರು ಬೇಧಿಸಿರುವ ಘಟನೆ ರವಿವಾರ ನಡೆದಿದೆ.
ನಗರದ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ವಾಸಿಸುತ್ತಿರುವ ರಾಯಚೂರು ಮೂಲದ ವೀರಮ್ಮ ಮತ್ತು ಸಿದ್ದಪ್ಪ ಎಂಬ ದಂಪತಿಗಳ ಸಿಂಚನಾ(5)ಎಂಬ ಮಗು ಜೂ.21ರ ಶನಿವಾರ ಮಧ್ಯಾಹ್ನ 2.00ರ ವೇಳೆಗೆ ನಾಪತ್ತೆಯಾಗಿತ್ತು. ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಬೆಸ್ಕಾಂ ಕಾಮಗಾರಿಯಿಂದಾಗಿ ಶನಿವಾರ ಇಡೀ ದಿನ ಬಡಾವಣೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಸಿಸಿಟಿವಿಗಳಲ್ಲಿ ಮಗುವಿನ ದೃಶ್ಯ ಸಿಕ್ಕಿರಲಿಲ್ಲ. ಆಗ ಶ್ವಾನದಳದ ನೆರವು ಪಡೆದ ಪೊಲೀಸರು, ಮಗುವಿನ ದಿನಬಳಕೆಯ ಬಟ್ಟೆಯೊಂದರ ವಾಸನೆಯ ಜಾಡು ಹಿಡಿದು ಪತ್ತೆ ಕಾರ್ಯ ಪ್ರಾರಂಭಿಸಿದ್ದರು ಎನ್ನಲಾಗಿದೆ.
ವಾಸನೆ ಹಿಡಿದ ನಾಯಿಗಳು ನಾಪತ್ತೆಯಾದ ಸ್ಥಳದಿಂದ ಸುಮಾರು 600 ಮೀಟರ್ ದೂರದಲ್ಲಿದ್ದ ಬಸಮ್ಮ(55) ಎಂಬುವರ ನಿವಾಸದ ಬಳಿ ಕರೆದೊಯ್ದಿತ್ತು. ಬಸಮ್ಮ ಕುಟುಂಬದವರೂ ಸಹ ರಾಯಚೂರಿನವರೇ ಆಗಿದ್ದು, ಮಗುವಿನ ಪೋಷಕರಿಗೆ ಆಪ್ತರಾಗಿದ್ದರು. ಪೊಲೀಸರು ಮೊದಲು ವಿಚಾರಣೆ ಮಾಡಿದಾಗ ಮಗುವನ್ನು ಕದ್ದೊಯ್ದಿದ್ದ ವಿಷಯ ಬಾಯ್ದಿಟ್ಟಿದ್ದಳು. ಕೂಡಲೇ ಚಿನ್ನೂರಿನ ಬಳಿ ಸಾಗಿಸಲಾಗುತ್ತಿದ್ದ ಮಗುವನ್ನು ಆರೋಪಿಗಳೊಂದಿಗೆ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





