Bengaluru | ರೌಡಿಶೀಟರ್ ಗಳ ನಡುವೆ ಹೊಡೆದಾಟ: ಓರ್ವ ರೌಡಿಶೀಟರ್ ನ ಕೊಲೆ

ಕೊಲೆ ನಡೆದ ಸ್ಥಳ
ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಎರಡು ರೌಡಿಶೀಟರ್ ಗಳ ಗುಂಪಿನ ಮಧ್ಯೆ ಸಂಭವಿಸಿದ ಹೊಡೆದಾಟದಲ್ಲಿ ಓರ್ವ ರೌಡಿಶೀಟರ್ ಕೊಲೆಯಾದ ಘಟನೆ ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ದೀಪಕ್ ಕೊಲೆಯಾದ ವ್ಯಕ್ತಿ.
ಶನಿವಾರ ದೀಪಕ್ ಹಾಗೂ ಈಶ್ವರ್, ನೇಪಾಳಿ ಸುಮನ್ ಎಂಬ ಎರಡು ರೌಡಿಗಳ ಗುಂಪಿನ ನಡುವೆ ನಂದಿನಿ ಲೇಔಟ್ ನ ಗುಲ್ಬರ್ಗಾ ಕಾಲನಿಯಲ್ಲಿ ಗಲಾಟೆ ನಡೆದಿತ್ತು. ರವಿವಾರ ನಂದಿನಿ ಲೇಔಟ್ ನ ಗಣೇಶ ವಿಸರ್ಜನೆ ಪೀಣ್ಯದ ಚೊಕ್ಕಸಂದ್ರ ಕೆರೆಯಲ್ಲಿ ನಡೆದಿತ್ತು. ಇದರಲ್ಲಿ ದೀಪಕ್ ಮತ್ತು ಗ್ಯಾಂಗ್ ಭಾಗಿಯಾಗಿದ್ದರೆ ಅವರ ಎದುರಾಳಿ ಗ್ಯಾಂಗ್ ಕೂಡ ಭಾಗಿಯಾಗಿತ್ತು.
ಈ ವೇಳೆ ದೀಪಕ್ ವ್ಯಕ್ತಿಯೊಬ್ಬನ ಕಾಲು ತುಳಿದಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಪುನಃ ಮಾರಾಮಾರಿ ನಡೆದಿದೆ. ಈ ವೇಳೆ ದೀಪಕ್ ಗೆ ಡ್ರಾಗರ್ ನಿಂದ ಮಾರಣಾಂತಿಕವಾಗಿ ಇರಿಯಲಾಗಿದೆ. ಗಂಭೀರ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




