Bengaluru | ಆಟೋ ಪಲ್ಟಿಯಾಗಿ ಕಾಂಗ್ರೆಸ್ ಮುಖಂಡ ಬೋರಯ್ಯ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು: ಅತಿವೇಗವಾಗಿ ಚಲಿಸುತ್ತಿದ್ದ ಆಟೋಗೆ ಹಸು ಅಡ್ಡ ಬಂದ ಪರಿಣಾಮ, ಅದಕ್ಕೆ ಢಿಕ್ಕಿ ಹೊಡೆದ ಆಟೋ ಪಲ್ಟಿಯಾಗಿ ಕಾಂಗ್ರೆಸ್ ಮುಖಂಡ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಪಸಾಗರ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಕಾಂಗ್ರೆಸ್ ಮುಖಂಡ ಬೋರಯ್ಯ (65) ಎಂದು ಗುರುತಿಸಲಾಗಿದೆ. ಆಟೋದಲ್ಲಿ ಬೋರಯ್ಯ, ಅವರ ಪುತ್ರ, ಪತ್ರಕರ್ತ ನಾಗರಾಜ್ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ 13 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬೋರಯ್ಯ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ ಅವರ ಸ್ವಗ್ರಾಮ ಅರಳೆಮರದೊಡ್ಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತ ಬೋರಯ್ಯ ಅವರು ಈ ಹಿಂದೆ ಸೀಗೆಕುಪ್ಪೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. ಅವರ ಅಗಲಿಕೆಗೆ ಅರಳೆಮರದೊಡ್ಡಿ, ಸೀಗೆಕುಪ್ಪೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






