ಬೆಂಗಳೂರು | ನೌಕರ ಆತ್ಮಹತ್ಯೆ: ಓಲಾ ಸಿಇಒ ಭವೀಶ್ ಅಗರ್ವಾಲ್ ವಿರುದ್ಧ ಪ್ರಕರಣ ದಾಖಲು

ಓಲಾ ಮುಖ್ಯಸ್ಥ ಮತ್ತು ಸಿಇಒ ಭವೀಶ್ ಅಗರ್ವಾಲ್ PC : PTI
ಬೆಂಗಳೂರು : ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಓಲಾ ನೌಕರನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಓಲಾ ಮುಖ್ಯಸ್ಥ ಮತ್ತು ಸಿಇಒ ಭವೀಶ್ ಅಗರ್ವಾಲ್ ಹಾಗೂ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತ್ ಕುಮಾರ್ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಕೆ.ಅರವಿಂದ್ (28) ಎಂದು ಗುರುತಿಸಲಾಗಿದ್ದು, ತನಗೆ ಕೆಲಸದ ಸ್ಥಳದಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆತ ತನ್ನ ಸಾವಿಗೂ ಮುನ್ನ ಬರೆದಿರುವ 28 ಪುಟಗಳ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಮೃತ ಅರವಿಂದ್ ಸಹೋದರ ಅಶ್ವಿನ್ ಕಣ್ಣನ್ ನೀಡಿದ ದೂರನ್ನು ಆಧರಿಸಿ, ಪ್ರಕರಣ ದಾಖಲಿಸಿಕೊಳ್ಳಿಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಭವೀಶ್ ಅಗರ್ವಾಲ್, ವಾಹನ ಸ್ವೀಕಾರ ಮತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅರವಿಂದ್ ಸಾವಿನ ನಂತರ, ಸುಮಾರು 17.46 ಲಕ್ಷ ರೂ. ಹಣಕಾಸು ಅವ್ಯವಹಾರ ನಡೆಸಲಾಗಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
‘ಅರವಿಂದ್ ರ ವೇತನ ಮತ್ತು ಭತ್ಯೆಗಳನ್ನು ಕಂಪನಿ ತಡೆಹಿಡಿದಿದೆ” ಎಂದು ದೂರಿನಲ್ಲಿ ಆಪಾದಿಸಲಾಗಿದೆ.







