ಬೆಂಗಳೂರಿನಲ್ಲಿ ನ.17 ರಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ; ಈ ಬಾರಿಯ ವಿಶೇಷತೆ ಏನು?
ಕೃಷಿ ಮೇಳ- ಫೈಲ್ ಚಿತ್ರ
ಬೆಂಗಳೂರು, ನ.16: ಕೃಷಿ ವಿಶ್ವ ವಿದ್ಯಾಲಯದ ವತಿಯಿಂದ ನ.17ರಿಂದ ನ.20ರ ವರೆಗೆ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ‘ಆಹಾರ- ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬುದು ಮೇಳದ ಘೋಷವಾಕ್ಯವಾಗಿದೆ ಎಂದು ವಿವಿಯ ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೃಷಿಮೇಳದಲ್ಲಿ ಎಂ.ಎಲ್-322 ಎಂಬ ರಾಗಿ, ಜಿ.ಪಿ.ಯು.ಎಲ್-11 ಸಾಮೆ, ಜಿ.ಪಿ.ಯು.ಪಿ-32 ಬರಗು, ಕೆ.ಬಿ.ಎಸ್.ಹೆಚ್.-85 ಸೂರ್ಯಕಾಂತಿ, ಜಿ.ಕೆ.ವಿ.ಕೆ ಕೆಂಪು ಹಲಸು ಎಂಬ ಐದು ಬಗೆಯ ತಳಿಗಳನ್ನು ರೈತರಿಗೆ ಪರಿಚಯ ಮಾಡಲಾಗುತ್ತಿದೆ. ಬೀಜಸಂತೆ, ಸಿರಿಧಾನ್ಯಗಳ ಆಹಾರ ಮೇಳ ಈ ಬಾರಿಯ ಕೃಷಿ ಮೇಳದ ವೈಶಿಷ್ಟ್ಯತೆಗಳಾಗಿವೆ ಎಂದರು.
ಮೇಳದಲ್ಲಿ ಒಟ್ಟು 625 ಮಳಿಗೆಗಳು ಇರಲಿವೆ. ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು. ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ಜೂಮ್ ಸಭೆ ಮೂಲಕ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಾಡಲ್ ಬದನೆ, ಯುರೋಪಿಯನ್/ಇಂಗ್ಲಿಷ್ ಸೌತೆ, ಚೆರ್ರಿ ಟೊಮೆಟೊ, ಪೋಲ್ ಬೀನ್ಸ್, ಆರ್ನಮೆಂಟಲ್ ಸೂರ್ಯಕಾಂತಿ, ಕೇಲ್, ಐಸ್ಬರ್ಗ್, ಬ್ರೊಕೋಲಿಯಂತಹ ವಿಶಿಷ್ಟ ಸೊಪ್ಪು ತರಕಾರಿ ಹಾಗೂ ಹೂ ತಳಿಗಳನ್ನು ಆವರಣದಲ್ಲಿಯೇ ಬೆಳೆಯಲಾಗಿದ್ದು, ಮೇಳದಲ್ಲಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಡಾರ್ಪರ್, ರ್ಯಾಂಬುಲೆಟ್, ಬನ್ನೂರು, ಎಳಗ, ಸಾನನ್, ನಾರಿಸುವರ್ಣ, ಬೆಂಗಳೂರು ಉದ್ದ ಕಿವಿ ಮೇಕೆ, ಫಿಜ್ಜಲ್, ರೋಸ್ ಕುಂಬ್, ಸಿಲ್ಕಿ, ಮಲೇಷಿಯನ್, ಸೆರಾಮ, ಹೌಡನ್, ಸೆಬ್ರೈಟ್, ಕೊಲಂಬಿಯನ್ ಬರಾಮ ಇತ್ಯಾದಿ ಕುರಿ, ಮೇಕೆ, ಕೋಳಿ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.