ಬೆಂಗಳೂರು: ಒಂದು ತಿಂಗಳಿನೊಳಗೆ ಸಾಲ ಮನ್ನಾ ಮಾಡುವಂತೆ ರೈತ ನಾಯಕರು ಪಟ್ಟು

ಬೆಂಗಳೂರು: ಬರದಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರು ಸಿಗದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದು ತಿಂಗಳಿನೊಳಗೆ ರೈತರ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ, ದಿಲ್ಲಿ ಚಲೋ ನಡೆಸುವುದಾಗಿ ರೈತ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದ ಮೈದಾನದಲ್ಲಿ ವಿಶ್ವ ರೈತ ದಿನದ ಅಂಗವಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ), ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ರೈತರ ಮಹಾ ಅಧಿವೇಶನದಲ್ಲಿ ವಿವಿಧ ರಾಜ್ಯಗಳಿಂದ ರೈತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೇಂದ್ರ ಸರಕಾರವು 150 ಉದ್ಯಮಿಗಳ 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ದೇಶದಲ್ಲಿ 65 ಕೋಟಿ ರೈತರ 6.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿಲ್ಲ. ಇಲ್ಲಿ ಆಹಾರ ಬೆಳೆಯುವ ರೈತರಿಗಿಂತ ಉದ್ಯಮಿಗಳು ಪ್ರಮುಖವಾಗಿದ್ದಾರೆ. ಕೂಡಲೇ ರಾಷ್ಟ್ರೀಯ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತ ನಾಯಕರು ಆಗ್ರಹಿಸಿದರು.
ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಮುಖಂಡ ಜಗಜಿತ್ ಸಿಂಗ್ ದಲೈವಲಾ, ರೈತ ಸಂಕುಲ ಉಳಿಸಲು ನಮ್ಮ ಹೋರಾಟ ಅನಿವಾರ್ಯವಾಗಿದೆ. ಪಂಜಾಬಿನಿಂದ ಮುಂಬೈ ತನಕ ಸಾವಿರಾರು ರೈತರ ಜೊತೆಗೂಡಿ ಹೋರಾಟ ನಡೆಸಿ ಯಶಸ್ವಿಯಾಗಿದ್ದೇವೆ. ಅದೇ ರೀತಿ, ಮುಂದಿನ ಫೆಬ್ರವರಿ 26ರಂದು ಹೊಸದಿಲ್ಲಿಯಲ್ಲಿ ರೈತರ ಕಹಳೆ ಮೊಳಗಿಸೋಣ. ಸಾವಿರಾರು ಸಂಖ್ಯೆಯಲ್ಲಿ ದಿಲ್ಲಿಗೆ ಬನ್ನಿ ಎಂದು ಆಹ್ವಾನಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರು ದೇಶದ ಜನರ ಅನ್ನಕ್ಕಾಗಿ ಸಾಲ ಮಾಡಿದ್ದಾರೆ. ಹಣವನ್ನು ಭೂಮಿಗೆ ಹಾಕಿದ್ದಾರೆ. ಪ್ರಕೃತಿಯ ತೊಂದರೆಯಿಂದ ಸಾಲದ ಹಣ ವಾಪಸ್ ಬಂದಿಲ್ಲ. ಅದಕ್ಕೆ ರೈತರು ಹೊಣೆಯಲ್ಲ. ಆದುದರಿಂದ, ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸ್ವಾತಂತ್ರ ಬಂದು 76 ವರ್ಷಗಳಾದರೂ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ, ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ದೇಶದ ಜನರಿಗಾಗಿ ಆಹಾರ ಬೆಳೆಯುವ ರೈತನಿಗೆ 60 ವರ್ಷ ತುಂಬಿದರೂ ಜೀವನ ಭದ್ರತೆ ಇಲ್ಲ. ಅಂತಹ ರೈತರಿಗೆ ಪ್ರತಿ ತಿಂಗಳು 5 ಸಾವಿರ ರೂ. ಪಿಂಚಣಿ ಏಕೆ ಕೊಡಬಾರದು ಎಂದರು.
ಕೇರಳ ರಾಜ್ಯದ ಕೆ.ವಿ.ಬಿಜು, ಹರಿಯಾಣದ ಅಭಿಮನ್ ಕೋಹರ, ಒಡಿಶಾದ ಸಚಿನ್ ಮಹಾಪಾತ್ರ, ಮಹಾರಾಷ್ಟ್ರದ ಶಂಕರ್ ದರಕರ್, ತಮಿಳುನಾಡಿನ ಪಿ.ಆರ್.ಪಾಂಡೆ, ಬಿಹಾರದ ಅರುಣ್ ಮಿಶ್ರಾ, ಹರಿಯಾಣದ ಲಕ್ವಿನ್ಧರ್ ಸಿಂಗ್ ಮಾತನಾಡಿದರು. ರಾಜ್ಯ ಕಬ್ಬು ಬೆಳೆಗಾರ ಸಂಘದ 15ನೆ ವರ್ಷದ ಸ್ಮರಣ ಸಂಚಿಕೆ ಕಲ್ಮೇಶ ಯಲ್ಲದಗಿ ಬಿಡುಗಡೆ ಮಾಡಿದರು.
ಐಎಎಸ್ ಪದವಿ ಪುರಸ್ಕಾರ ಮಾಡಿದ ರೈತರಾದ ಕಲ್ಮೇಶ ಯಲ್ಲದಗಿ, ಬೆಳಗಾವಿ ಗಜೇಂದ್ರಸಿಂಗ್ ಕನಕಪುರ, ಶೈಲಜಾ ತುಮಕೂರು, ಅಂಗವಿಕಲ ರೈತ ಮಹೇಂದ್ರ ಮೈಸೂರ್, ಈಶ್ವರ್ ಮಿರಾಸಿರವರಿಗೆ ಗೌರವಿಸಲಾಯಿತು. ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬು ಕುಮಾರ್ ಸುಮಾರು 10 ಸಾವಿರ ರೈತರು ಸಾಲ ಮನ್ನಾ ಕೋರಿ ಸಲ್ಲಿಸಿರುವ ಪತ್ರವನ್ನು ಸ್ವೀಕರಿಸಿ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.







