Bengaluru | ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ; ಐವರು ಆರೋಪಿಗಳು ಸೆರೆ

ಬೆಂಗಳೂರು : ಯಲಹಂಕ ಉಪನಗರದಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ (35) ಎಂಬುವವರನ್ನು ಹತ್ಯೆ ಮಾಡಿ, ಧರ್ಮಸ್ಥಳದಲ್ಲಿ ತಲೆಮರಿಸಿಕೊಂಡಿದ್ದ ಐವರು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಕಿರಣ್ ಗೌಡ(24), ರುದ್ರೇಶ್(39), ಲೋಕೇಶ್(47) ಆಕಾಶ್(19) ಹಾಗೂ ಕಿರಣ್ ಕುಮಾರ್(40) ಬಂಧಿತ ಆರೋಪಿಗಳಾಗಿದ್ದು, ಆರೋಪಿ ಲೋಕೇಶ್ ಹಾಗೂ ಕಿರಣ್ ಗೌಡ ತಂದೆ-ಮಗ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಚರಣ್ ಮತ್ತು ಆರೋಪಿ ಕಿರಣ್ ಗೌಡ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಆದರೆ, ಕೆಲವು ವ್ಯವಹಾರಗಳ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಚರಣ್ ತನಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕಿರಣ್ ಗೌಡ, ಬಳಿಕ ಅವರೊಂದಿಗಿನ ವ್ಯವಹಾರದಿಂದ ಹೊರಬಂದಿದ್ದ. ಈ ಬೆಳವಣಿಗೆಯ ನಂತರ ಚರಣ್ ವಿರುದ್ಧ ಕಿರಣ್ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕಿರಣ್ ಗೌಡ ಎಂಬಾತನು ಚರಣ್ ಅವರನ್ನು ಹತ್ಯೆ ಮಾಡಲು ರುದ್ರೇಶ್ ಎಂಬಾತನಿಗೆ 30 ಲಕ್ಷ ರೂ.ಗಳ ಸುಪಾರಿ ನೀಡಿದ್ದನು. ಈ ಒಪ್ಪಂದ ಪಡೆದ ರುದ್ರೇಶ್, ಬಳಿಕ ಲೋಕೇಶ್ ಜೊತೆ ಮಾತುಕತೆ ನಡೆಸಿದ್ದಾನೆ. ನಂತರ ಕಿರಣ್ ಕುಮಾರ್ ಮತ್ತು ಆಕಾಶ್ ಎಂಬುವವರ ಮೂಲಕ ಹತ್ಯೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಚರಣ್ ಚಲನವಲನಗಳನ್ನು ಗಮನಿಸಿದ್ದ ಆರೋಪಿಗಳು, ಅವರು ಕಚೇರಿಗೆ ಬರುವ ಸಮಯದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು.
ಅದರಂತೆ ನ.13ರಂದು ಬೆಳಗ್ಗೆ ಚರಣ್ ಕಚೇರಿಗೆ ಬಂದಾಗ ಪತ್ನಿಯ ಕಣ್ಣೆದುರೇ ಮಚ್ಚಿನಿಂದ ಹಲ್ಲೆ ನಡೆಸಿ, ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಹಾಗೂ ವಿಚಾರಣೆ ಮುಂದುವರಿಸಿದ್ದಾರೆ.






