ಬೆಂಗಳೂರು: ಡಯಾಲಿಸಿಸ್ ಸೆಂಟರ್ ಸಿಬ್ಬಂದಿಗಳ ವೇತನ ಪಾವತಿಲು ಒತ್ತಾಯ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯ ಸರಕಾರವು ಡಯಾಲಿಸಿಸ್ ಸೆಂಟರ್ ಸಿಬ್ಬಂದಿಗಳ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಡಯಾಲಿಸಿಸ್ ಸೆಂಟರ್ ಆಪರೇಟರ್ಸ್ ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಿದರು.
ಎರಡುವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುದ್ದೇವೆ. ಇದು ಕನಿಷ್ಠ ಜೀವನಕ್ಕೂ ಸಾಲುತ್ತಿಲ್ಲ. ಅಲ್ಲದೇ ಕಳೆದ ಎರಡುವರೆ ತಿಂಗಳ ಸಂಬಳ ತಡೆಹಿಡಿಯಲಾಗಿದ್ದು, ಅರ್ಧ ಸಂಬಳವೂ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದರೂ ಸಚಿವರು ಸ್ಪಂದಿಸಿಲ್ಲ. ಆರೋಗ್ಯ ಸಚಿವರಿಗೆ ಹಲವು ಬಾರಿ ಮನವಿ ಮಾಡಿದರೂ ನಮಗೆ ಸರಕಾರದಿಂದಾಗಲಿ, ಅಧಿಕಾರಿಗಳಿಂದಾಗಿ ಸ್ಪಂದನೆ ಸಿಕ್ಕಿಲ್ಲ. ನಮ್ಮ ಕಷ್ಟ ಹೇಳಿದರೂ, ಸಮಸ್ಯೆಗಳು ಈಡೇರಿಲ್ಲ. ಹಾಗಾಗಿ ರಾಜ್ಯದ ಎಲ್ಲ ಡಯಾಲಿಸಿಸ್ ಸೆಂಟರ್ ಗೆ ಸಾಮೂಹಿಕ ಗೈರಾಗಿ ಧರಣಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರತಿ ಬಾರಿ ಸಚಿವರನ್ನು ಭೇಟಿ ಮಾಡಿದರೂ, ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ಯಾವುದೇ ರೀತಿ ಸಕಾರಾತ್ಮಕವಾಗಿ ಸ್ಪಂಧಿಸುತ್ತಿಲ್ಲ. ಹಾಗಾಗಿ ಈ ಬಾರಿ ಸಚಿವರು ಸಭೆಯನ್ನು ಆಯೋಜಿಸಿ ಬೇಡಿಕೆಗಳ ಕುರಿತು ಲಿಖಿತ ಭರವಸೆ ನೀಡಬೇಕು. ಬಾಕಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.







