ಬೆಂಗಳೂರು | ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ವಿದೇಶಿ ಮಹಿಳೆಯ ಬಂಧನ: 10 ಕೋಟಿ ರೂ.ಮೌಲ್ಯದ ಮಾಲು ಜಪ್ತಿ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಮಾದಕ ದ್ರವ್ಯಗಳ ಸಾಗಾಣಿಕೆಯಲ್ಲಿ ತೊಡಗಿದ್ದ ಓರ್ವ ವಿದೇಶಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು, 10 ಕೋಟಿ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದ್ದಾರೆ.
ಜೂ.13ರಂದು ಸಿಸಿಬಿ ಪೊಲೀಸರು ಹಾಗೂ ಚಿಕ್ಕಜಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆಯನ್ನು ಬಂಧಿಸಿದ್ದು, ಆಕೆಯಿಂದ 10 ಕೋಟಿ ರೂ. ಮೌಲ್ಯದ 5.325 ಕೆ.ಜಿ. ಕ್ರಿಸ್ಟೆಲ್ ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಪ್ರಿನ್ಸಸ್, ಆರಂಭದಲ್ಲಿ ಹೊಸದಿಲ್ಲಿಯಲ್ಲಿ ವಾಸವಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದಿದ್ದಳು. ಆದರೆ, ಕಾಲೇಜಿಗೆ ದಾಖಲಾಗದೇ ಡ್ರಗ್ ಪೆಡ್ಲಿಂಗ್ಗೆ ಇಳಿದಿದ್ದಳು. ದಿಲ್ಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಡ್ರಗ್ ಸಾಗಾಟ ಮಾಡಿದ್ದು, ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ ಎಂದು ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಸ್ನೇಹಿತೆಯ ಪತ್ತೆ ಕಾರ್ಯ ಮುಂದುವರೆದಿದೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.







