Bengaluru | ಅಕ್ರಮವಾಗಿ ಚಿನ್ನಸಾಗಣೆ; 2.6 ಕೋಟಿ ರೂ.ಮೌಲ್ಯದ ಚಿನ್ನ ವಶ, ನಾಲ್ವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : Image by muhammad.abdullah on Magnific
ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ ಅಂದಾಜು 2.6 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಮತ್ತು ಅಶಾರುದ್ದೀನ್ ಚೆಲ್ಲದುರೈ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಆರೋಪಿಗಳು ತಮ್ಮ ಪಾದಗಳ ಅಡಿಯಲ್ಲಿ ಹಾಗೂ ಪಾದದ ಅಕ್ಕಪಕ್ಕದಲ್ಲಿ ಚಿನ್ನದ ಬಾರ್ ಗಳನ್ನು ಕಪ್ಪು ಟೇಪ್ ಬಳಸಿ ಗಟ್ಟಿಯಾಗಿ ಕಟ್ಟಿಕೊಂಡು ವಿಮಾನ ನಿಲ್ದಾಣದಿಂದ ಹೊರಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಅಂದಾಜು 2.6 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ: ಕಸ್ಟಮ್ಸ್ ಅಧಿಕಾರಿಗಳ ಗುಪ್ತಚರ ಮಾಹಿತಿ ಮತ್ತು ಕರಾರುವಾಕ್ ಪ್ರೊ ಫೈಲಿಂಗ್ ಆಧಾರದ ಮೇಲೆ ಟರ್ಮಿನಲ್ 2ರ ನಿರ್ಗಮನ ದ್ವಾರದಲ್ಲಿ ಈ ತಂಡವನ್ನು ತಡೆದು ತೀವ್ರ ತಪಾಸಣೆ ನಡೆಸಲಾಗಿದೆ. ಈ ವೇಳೆ ಇವರು ಪಾದಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.6 ಕೆಜಿ ತೂಕದ 28 ಚಿನ್ನದ ಬಾರ್ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ಅಂದಾಜು 2.6 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಚಿನ್ನದ ಜೊತೆಗೆ 13 ನವೀಕರಿಸಿದ ಮೊಬೈಲ್ ಫೋನ್ಗಳು ಮತ್ತು 8 ಲ್ಯಾಪ್ಟಾಪ್ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.






