Bengaluru | ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯ ಮೂಡಿಸುವುದು ಅಗತ್ಯ: ಕೃಷ್ಣಪ್ಪ

ಬೆಂಗಳೂರು : ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ’ ಕುರಿತು ಕಾನೂನು ಅರಿವು, ದೌರ್ಜನ್ಯ ಎಸಗುವವರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲಾ ಜಂಟಿ ನಿರ್ದೇಶಕ ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಟಿ.ದಾಸರಹಳ್ಳಿಯ ಸೌಂದರ್ಯ ಪ್ಯಾರಡೈಸ್ ಹಾಲ್‍ನಲ್ಲಿ ದಲಿತ ಬಹುಜನ ಚಳವಳಿ-ಕರ್ನಾಟಕ ಹಾಗೂ ಡಾ.ಅಂಬೇಡ್ಕರ್ ರಥ ಸೇನಾ-ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಅಧಿನಿಯಮ-1989 ಹಾಗೂ ನಿಯಮಗಳು-1995ರ ಪರಿಣಾಮಕಾರಿ ಅನುಷ್ಠಾನ ಮತ್ತು ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿರುವುದು ಬಹಳ ಉಪಯುಕ್ತ ಕಾರ್ಯವಾಗಿದೆ. ‘ದೌರ್ಜನ್ಯ ತಡೆ ಕಾಯ್ದೆಯಡಿ 44ಕ್ಕೂ ಹೆಚ್ಚು ಉಪನಿಯಮಗಳಿವೆ ಎಂದು ಅವರು ತಿಳಿಸಿದರು.
ಭೂಮಿ, ನೀರು, ದಾರಿ ಹಾಗೂ ಸಾಮಾಜಿಕ ಕಿರುಕುಳಗಳಿಗೆ ಸಂಬಂಧಿಸಿದಂತೆ ಕಠಿಣ ಶಿಕ್ಷೆ ಮತ್ತು ಸಂತ್ರಸ್ತರಿಗೆ ಪರಿಹಾರದ ಅವಕಾಶಗಳು ಈ ಕಾನೂನಿನಲ್ಲಿವೆ. ಕೇವಲ ಎಸ್‍ಸಿ, ಎಸ್‍ಟಿ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ಮಾತ್ರ ಅರಿವು ಮೂಡಿಸಿದರೆ ಸಾಲದು, ಬದಲಾಗಿ ದೌರ್ಜನ್ಯ ಎಸಗುವ ಮನಸ್ಥಿತಿಯುಳ್ಳವರಿಗೂ ಕಾನೂನಿನ ಕಠಿಣತೆಯ ಬಗ್ಗೆ ಜಾಗೃತಿ ಮೂಡಿಸಿದಾಗ ಮಾತ್ರ ಕಾಯ್ದೆಯ ಮೂಲ ಉದ್ದೇಶ ಸಫಲವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲ ನರಸಿಂಹಪ್ಪ, ದಲಿತ ಬಹುಜನ ಚಳುವಳಿ ಸಂಚಾಲಕ ವೆಂಕಟೇಶ್, ಡಾ. ಅಂಬೇಡ್ಕರ್ ರಥ ಸೇನೆಯ ರಾಜ್ಯಾಧ್ಯಕ್ಷೆ ಎನ್.ನಾಗರತ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






