Bengaluru | ಕೋಟ್ಯಂತರ ರೂ.ಮೌಲ್ಯದ ಚಿನ್ನಾಭರಣ, ನಗದು ದೋಚಿದ ಪ್ರಕರಣ: ಮನೆಗೆಲಸದಾಕೆ ಸಹಿತ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು: ಹೊಸ ವರ್ಷಾಚರಣೆಗೆ ತೆರಳಿದ್ದವರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು, ದುಬಾರಿ ವಾಚ್ಗಳನ್ನು ದೋಚಿದ್ದ ಪ್ರಕರಣದಡಿ ಮನೆಗೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಹಾಝೀರಾ ಬೇಗಂ ಹಾಗೂ ಆಕೆಯ ಪತಿ ಶಾಹಿರ್ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ಆಭರಣಗಳು, 7 ವಾಚ್ ಸಹಿತ ಒಟ್ಟು 1.37 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾಶಿವನಗರದ ನಿವಾಸಿಯಾಗಿರುವ ಅಭಿಷೇಕ್ ಎಂಬವವರ ಮನೆಯಲ್ಲಿ ಹಲವು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಹಾಝೀರಾ ಬೇಗಂ ಮದುವೆಯ ಕಾರಣ ನೀಡಿ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ, ಈ ಬಾರಿ ಹೊಸ ವರ್ಷ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಪುನಃ ಬಂದಿದ್ದ ಹಾಝೀರಾ, ಕೆಲಸಕ್ಕೆ ಸೇರಲು ಇಂಗಿತ ವ್ಯಕ್ತಪಡಿಸಿದ್ದಳು. ಮೊದಲಿನಿಂದ ಪರಿಚಿತಳಲ್ಲವೇ ಎಂದು ಆಕೆಯನ್ನು ನಂಬಿದ ಮಾಲಕರು, ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ಡಿಸೆಂಬರ್ 30ರಂದು ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಹೊಸವರ್ಷದ ಸಂಭ್ರಮಾಚರಣೆಗಾಗಿ ತಮಿಳುನಾಡಿಗೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡಿದ್ದ ಹಾಝೀರಾ, ತನ್ನ ಪತಿ ಶಾಹಿರ್ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಮನೆಯ ಕೀ ಬಳಸಿ 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಇಬ್ಬರೂ ಪರಾರಿಯಾಗಿದ್ದರು. ಡಿಸೆಂಬರ್ 31ರಂದು ಅಭಿಷೇಕ್ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಗೆ ಅಭಿಷೇಕ್ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹಾಝೀರಾ ಬೇಗಂ ಮತ್ತು ಆಕೆಯ ಪತಿ ಶಾಹೀರ್ನನ್ನು ಬಂಧಿಸಿದ್ದಾರೆ. ಅವರಿಂದ 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.







