Bengaluru | ಪತ್ರಕರ್ತ ಜಿ. ಮಹಂತೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ: ದೂರು ದಾಖಲು

ಜಿ. ಮಹಂತೇಶ್
ಬೆಂಗಳೂರು: ನ್ಯೂಸ್ ವೆಬ್ಸೈಟಿನಲ್ಲಿ ಪ್ರಕಟಿಸಿದ ವರದಿಗಳಿಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಕರೆ ಹಾಗೂ ವಾಟ್ಸ್ಆ್ಯಪ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಪತ್ರಕರ್ತ ಜಿ. ಮಹಂತೇಶ್ ಭದ್ರಾವತಿ ಅವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆ.8 ಮತ್ತು 9ರಂದು ಪ್ರಕಟಿಸಿದ್ದ ವರದಿಗಳನ್ನು ತಮ್ಮ ಹೆಸರಿನಲ್ಲಿರುವ ‘Mahanthesh Bhadravathi’ ಹಾಗೂ ‘The-File’ ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿರುವುದಾಗಿ ತಿಳಿಸಿರುವ ಅವರು, ಈ ವರದಿಗಳಿಗೆ ಸಂಬಂಧಿಸಿ ವ್ಯಕ್ತಿಯೋರ್ವ 9916706273 ಸಂಖ್ಯೆಯಿಂದ ಮೊಬೈಲ್ ಹಾಗೂ ವಾಟ್ಸ್ಆ್ಯಪ್ ಕರೆ ಮಾಡಿ, ವರದಿಗಳ ಬಗ್ಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ವರದಿಗಳನ್ನು ತೆಗೆದುಹಾಕದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಪ್ರಕಟಿಸಿದ್ದ ಪೋಸ್ಟ್ಗಳಿಗೂ ಅವಾಚ್ಯ ಶಬ್ದಗಳಿಂದ ಕಮೆಂಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸುವಂತೆ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ.




