Bengaluru | ಕನ್ನಡಿಗರ ಉದ್ಯೋಗ ಹಕ್ಕುಗಳ ರಕ್ಷಣೆಗೆ ಐಟಿ-ಬಿಟಿ ಕಂಪೆನಿಗಳಿಗೆ ಕರವೇ ಆಗ್ರಹ ಪತ್ರ ಸಲ್ಲಿಕೆ

ಬೆಂಗಳೂರು : ಕನ್ನಡಿಗರಿಗೆ ಉದ್ಯೋಗದ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಆಗ್ರಹ ಅಭಿಯಾನದ ಪ್ರಯುಕ್ತ ಶನಿವಾರ ನಗರದ ವಿವಿಧ ಐಟಿ-ಬಿಟಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಕರವೇ ಮುಖಂಡರು ಆಗ್ರಹ ಪತ್ರ ಸಲ್ಲಿಸಿದ್ದಾರೆ.
ಕರವೇ ರಾಜ್ಯ ಪ್ರದಾನ ಸಂಚಾಲಕ ಮೋಹನ್ ಗೌಡ ನೇತೃತ್ವದ ನಿಯೋಗವು ಸಂಪಂಗಿ ರಾಮನಗರ ಬಳಿಯ ಬಾಗಮನೆ ಟೆಕ್ ಪಾರ್ಕ್‍ಗೆ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿದ್ದು, ಬಾಗಮನೆ ಟೆಕ್ ಪಾರ್ಕ್ ಪ್ರತಿನಿಧಿ ಅಲ್ಲಿನ ಸಂಸ್ಥೆಗಳ ಪರವಾಗಿ ಆಗ್ರಹ ಪತ್ರವನ್ನು ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದರು.
ಕರವೇ ರಾಜ್ಯ ಉಪಾಧ್ಯಕ್ಷ ವೀರಭದ್ರ ಹಾಗೂ ಕರವೇ ಕೆ.ಆರ್.ಪುರ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಬಿ.ನಾರಾಯಣಪುರ ಎಚ್‍ಪಿಇ ಸಂಸ್ಥೆಗೆ ಭೇಟಿ ನೀಡಿ ಆಗ್ರಹ ಪತ್ರ ನೀಡಿದರು.
ಮಾಗಡಿ ರಸ್ತೆಯ ಕ್ವಾಲಿಟಿ ಎವಾಲ್ಯುಯೇಷನ್ಸ್ ಸಂಸ್ಥೆಗೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್‍ಗೌಡ ಅವರ ನೇತೃತ್ವದ ನಿಯೋಗ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿತು.
ಅಲಿ ಅಸ್ಗರ್ ರಸ್ತೆಯ ಸಫೀನಾ ಟವರ್ ನಲ್ಲಿರುವ ಎಕ್ಸಿಕ್ಯೂಟಿವ್ ಸೆಂಟರ್ ಇಂಡಿಯಾ ಲಿಮಿಟೆಡ್ ಎಂಬ ಐಟಿ ಸಂಸ್ಥೆಗೆ ಕರವೇ ರಾಜ್ಯ ಉಪಾಧ್ಯಕ್ಷ ಅಬ್ಬಿಗೆರೆ ವಿನೋದ್ ಅವರ ನೇತೃತ್ವದ ತಂಡ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿದ್ದು, ಕರವೇ ಶಿವಾಜಿನಗರ ಕ್ಷೇತ್ರ ಅಧ್ಯಕ್ಷ ಸೈಯದ್ ತಂಜೀರ್, ಪುಲಕೇಶಿ ನಗರ ಘಟಕದ ಅಧ್ಯಕ್ಷ ಮುಹಮದ್ ಅಲಿ ಮತ್ತಿತರರು ಹಾಜರಿದ್ದರು.
ಆಗ್ರಹ ಪತ್ರದಲ್ಲಿ ಏನಿದೆ? :
ಐಟಿ-ಬಿಟಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ ಮತ್ತು ಅವರಲ್ಲಿ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳ ಪ್ರಮಾಣ. ಮೂರು ವರ್ಷಗಳಲ್ಲಿ ನಿಮ್ಮ ಸಂಸ್ಥೆಯು ನಡೆಸಿದ ನೇಮಕಾತಿಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ದೊರೆತ ಉದ್ಯೋಗಾವಕಾಶಗಳ ವಿವರ. ಅರ್ಹತೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆಯುವಂತೆ ಸಂಸ್ಥೆ ಕೈಗೊಂಡಿರುವ ಕ್ರಮಗಳು. ಕರ್ನಾಟಕದ ಯುವಜನರಿಗೆ ಕೌಶಲ್ಯಾಭಿವೃದ್ಧಿ, ತರಬೇತಿ, ಇಂಟರ್ನ್‍ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನಿಮ್ಮ ಸಂಸ್ಥೆ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡುವುದು ಹಾಗೂ ಸಂಸ್ಥೆಯ ನಿಲುವನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಲಾಗಿದೆ.






