ಬೆಂಗಳೂರು | ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಪೊಲೀಸ್ ಇನ್‌ಸ್ಪೆಕ್ಟರ್

ಬೆಂಗಳೂರು : ಲಂಚ ಪಡೆಯುವಾಗ ಇನ್‌ಸ್ಪೆಕ್ಟರ್ ಒರ್ವರು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಗೋವಿಂದರಾಜು ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್ ಎಂದು ಗುರುತಿಸಲಾಗಿದೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಸದ್ಯ ಇನ್‌ಸ್ಪೆಕ್ಟರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀಟಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿ ಇನ್‌ಸ್ಪೆಕ್ಟರ್ ಗೋವಿಂದರಾಜು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್‌ಸ್ಪೆಕ್ಟರ್ ಗೋವಿಂದರಾಜು, ಮೈಸೂರು ರಸ್ತೆಯ ಸಿರಸಿ ಸರ್ಕಲ್ ಸಮೀಪದ ಸಿಎಆರ್ ಗ್ರೌಂಡ್ ಬಳಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ನೇರವಾಗಿ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.





