Bengaluru | ವಕೀಲನನ್ನು ಗುಂಡಿಕ್ಕಿ ಹತ್ಯೆ

ಮಂಜುನಾಥ್
ಬೆಂಗಳೂರು: ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ರವಿವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್ (42) ಹತ್ಯೆಯಾದ ವಕೀಲ. ಇವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಆ ಭಾಗದಲ್ಲಿ ಪ್ರಭಾವಿ ಜಮೀನು ಮಾಲೀಕರೆಂದು ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ಕಳೆದ ರಾತ್ರಿ ಮಂಜುನಾಥ್ ಪಟ್ಟಂದೂರು ಆಗ್ರಹಾರದ ಮನೆಯಲ್ಲಿದ್ದರು ರಾತ್ರಿ 11:30 ರ ಸುಮಾರಿಗೆ ಬಂದಿರುವ ದುಷ್ಕರ್ಮಿಗಳು ಮನೆ ಬಾಗಿಲು ಬಡಿದಿದ್ದಾರೆ. ಈ ವೇಳೆ ಮಂಜುನಾಥ್ ಬಾಗಿಲು ತೆರೆದಿದ್ದು ಹಂತಕರು ಮಂಜುನಾಥ್ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆ ಬಗ್ಗೆ ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಶೇಷ ತಂಡಗಳ ರಚನೆ ಮಾಡಿಕೊಂಡು ಹಂತಕರ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಜಮೀನು ವ್ಯಾಜ್ಯದ ಹಿನ್ನೆಲೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




