Bengaluru | ಎಸ್ಐಆರ್ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ: ನೂರಾರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಬೆಂಗಳೂರು : ಕಾನೂನು ಬಾಹಿರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ವಿರೋಧಿಸಿ, ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಶನಿವಾರ ನಗರದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು, ಬೃಹತ್ ಚಳವಳಿ ನಡೆಸಿದರು. ಈ ವೇಳೆ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು.
ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಸ್‍ಎಫ್‍ಐ, ಎಐಎಸ್‍ಎ, ಎಐಡಿಎಸ್‍ಒ, ಎಐಎಸ್‍ಎಫ್, ಕೆವಿಎಸ್ ಸೇರಿದಂತೆ ಎಡ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಅಂಕಣಕಾರ ಶಿವಸುಂದರ್ ಮಾತನಾಡಿ, ‘ನಮ್ಮ ಹೋರಾಟ ಜ್ಞಾನೇಶ್ ಕುಮಾರ್ ರಾಜೀನಾಮೆ ಅಥವಾ ಎಸ್‍ಐಆರ್ ರದ್ದಾದ ಮಾತ್ರಕ್ಕೆ ನಿಲ್ಲಬಾರದು’ ಎಂದು ಕರೆ ನೀಡಿದರು.
‘ಇಂದು ಸರಕಾರ ಸಂವಿಧಾನವನ್ನು ಆಟದ ಗೊಂಬೆಯನ್ನಾಗಿ ಮಾಡಿಕೊಂಡು ಫ್ಯಾಸಿಸಂನ್ನು ಹೇರುತ್ತಿದೆ. ಫ್ಯಾಸಿಸಂ ಅಂದರೆ ಆರೆಸ್ಸೆಸ್ ಹಾಗೂ ಬಿಜೆಪಿ ಅಷ್ಠೇ ಅಲ್ಲ. ಅದು ಆಳುವ ವರ್ಗದ ಸಿದ್ಧಾಂತದ ಆಳ್ವಿಕೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಧಮನಕಾರಿಯೇ. ಇವರ ವಿರುದ್ಧ ಕೇವಲ ಚುನಾವಣೆಗಳಿಂದ ಗೆಲ್ಲಲು ಸಾಧ್ಯವಿಲ್ಲ’ ಎಂದು ಶಿವಸುಂದರ್ ಹೇಳಿದರು.
ವಿದ್ಯಾರ್ಥಿ-ಯುವಜನರು ಇಂದು ಬೀದಿಗಿಳಿದು ಆರಂಭಿಸಿರುವ ಈ ಹೋರಾಟದಿಂದ ಮಾತ್ರವೇ ಫ್ಯಾಸಿಸಂ ಅನ್ನು ಸೋಲಿಸಲು ಸಾಧ್ಯ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾದ ಇಂದಿನ ವಿದ್ಯಾರ್ಥಿಗಳು ಭಗತ್ ಸಿಂಗ್ ಅವರ ಮಾರ್ಗದಲ್ಲಿ ನಡೆದು ಶೋಷಕ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಅವರು ಕರೆ ನೀಡಿದರು.
ಎಐಡಿಎಸ್‍ಒ ಖಜಾಂಚಿ ಸುಭಾಷ್ ಬಿ.ಜೆ ಮಾತನಾಡಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ದೇಶದಲ್ಲಿ ಹುಟ್ಟಿರುವ ನಾವು ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸುವುದಿಲ್ಲ. ಸರಕಾರ ಹಾಗೂ ವ್ಯವಸ್ಥೆ ಮಾಡಿರುವ ಎಲ್ಲ ಅಪರಾಧಗಳಿಗೂ ತಕ್ಕ ಪಾಠ ಕಲಿಸುತ್ತೇವೆ ಎಂಬ ಸಂದೇಶವನ್ನು ಸಾರಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೇವೆ ಎಂದು ತಿಳಿಸಿದರು.
ಭಾರತದಲ್ಲಿ ಯಾವುದೇ ಒಂದು ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗಲು ನಮಗೆ ಸ್ಪಷ್ಟ ವೈಚಾರಿಕತೆಯ ಅವಶ್ಯಕತೆ ಇದೆ. ಇಲ್ಲಿ ಆಡಳಿತ ಪಕ್ಷ ಬಿಜೆಪಿಯು ಅಧಿಕಾರವನ್ನು ಕಳೆದುಕೊಳ್ಳುವ ಭಯದಿಂದ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದರು.
ಎಸ್‍ಎಫ್‍ಐ ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ಇಂದು ಸರಕಾರ ದೇಶದ ಸಂವಿಧಾನವನ್ನು ಹಂತ ಹಂತವಾಗಿ ನಾಶ ಮಾಡುತ್ತಿದೆ. ಎಲ್ಲಾ ಕಾನೂನುಗಳನ್ನು ಬಳಸಿಕೊಂಡು ಜ್ಞಾನೇಶ್ ಕುಮಾರ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ನಾವೆಲ್ಲರೂ ಕಾನೂನುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಹಿಂದೆ ಬ್ರಿಟಿಷ್ ಮಾಡುತ್ತಿದ್ದ ಆಳ್ವಿಕೆಯನ್ನು ಇಂದು ಬಿಜೆಪಿ ಸರಕಾರ ಮಾಡುತ್ತಿದೆ. ಇದರ ವಿರುದ್ಧ ಹೋರಾಡಲು ನಾವೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಎಸ್‍ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್, ಎಐಡಿಎಸ್‍ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆಎಸ್, ಎಸ್‍ಎಫ್‍ಐ ರಾಜ್ಯ ಉಪಾಧ್ಯಕ್ಷ ಬಸವರಾಜು, ಕೆವಿಎಸ್‍ನ ಸರೋವರ ಬೆಂಕಿಕೆರೆ, ಎಐಎಸ್‍ಎನ ಗಂಗಾ ಮತ್ತಿತರರು ಉಪಸ್ಥಿತರಿದ್ದರು.
ಹೋರಾಟಗಾರರು ಪೊಲೀಸ್ ವಶಕ್ಕೆ :
ಪ್ರತಿಭಟನೆ ನಂತರ ರಾಜ್ಯ ಚುನಾವಣಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಫ್ರೀಡಂ ಪಾರ್ಕಿನಿಂದ ಹೊರಡಲಾಯಿತು. ಆದರೆ, ರಸ್ತೆ ತುಂಬಾ ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸರು ಹೋರಾಟವನ್ನು ತಡೆದು, ಹೋರಾಟಗಾರರನ್ನು ವಶಕ್ಕೆ ಪಡೆದು ಮೈಸೂರು ರಸ್ತೆಯ ಪರೇಡ್ ಮೈದಾನಕ್ಕೆ ಕರೆತಂದರು, ಅಲ್ಲಿಯೂ ವಿದ್ಯಾರ್ಥಿಗಳು ಪ್ರತಿಭಟನೆ ಹಾಗೂ ಘೋಷಣೆಗಳು ಮುಂದುವರಿದವು. ಆ ಬಳಿಕ ವಿದ್ಯಾರ್ಥಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.






