Bengaluru | ವೈದ್ಯಕೀಯ ಉಪಕರಣಗಳ ಲೇಬಲ್ ನಿಯಮ ಉಲ್ಲಂಘನೆ : 13.79 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ

ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : ವೈದ್ಯಕೀಯ ಉಪಕರಣಗಳ ಲೇಬಲ್ನಲ್ಲಿ ಕಡ್ಡಾಯ ಮಾಹಿತಿಗಳನ್ನು ನಮೂದಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಟನ್ ಪೇಟೆಯ ಎರಡು ಮಳಿಗೆಗಳ ಮೇಲೆ ದಾಳಿ ನಡೆಸಿರುವ ಔಷಧ ನಿಯಂತ್ರಣ ವಿಭಾಗದ ಅಧಿಕಾರಿಗಳು, ಸುಮಾರು 13.79 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಮತ್ತು ಬಳಕೆಯ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ನ.11 ಮತ್ತು 12ರಂದು ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಮಾಂಡೆವ್ ಸರ್ಜಿಫಾರ್ಮಾ ಪ್ರೈವೇಟ್ ಲಿಮಿಟೆಡ್ ನಿಂದ 6,57,031 ರೂ. ಹಾಗೂ ಶ್ರೀ ಮಾಂಡೆವ್ ಸರ್ಜಿಕಲ್ಸ್ ನಿಂದ 7,21,590 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಜಪ್ತಿ ಮಾಡಿದ ವಸ್ತುಗಳಲ್ಲಿ ಹಿಯರಿಂಗ್ ಏಡ್, ಕ್ಲಿನಿಕಲ್ ಥರ್ಮಾಮೀಟರ್, ಸರ್ಜಿಕಲ್ ಗ್ಲೌಸ್, ಯೂರಿನ್ ಬ್ಯಾಗ್, ಕಂಪ್ರೆಷನ್ ಸ್ಟಾಕಿಂಗ್ಸ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳು ಸೇರಿವೆ. ಈ ಪೈಕಿ ಹಲವು ಉತ್ಪನ್ನಗಳ ಲೇಬಲ್ಗಳಲ್ಲಿ ಬ್ಯಾಚ್ ಸಂಖ್ಯೆ, ತಯಾರಿಕೆ ಮತ್ತು ಮುಕ್ತಾಯದ ದಿನಾಂಕ, ತಯಾರಕರ ವಿವರ, ಪರವಾನಗಿ ಸಂಖ್ಯೆ ಹಾಗೂ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಂಆರ್ಪಿ) ಸೇರಿದಂತೆ ಕಡ್ಡಾಯವಾಗಿ ನಮೂದಿಸಬೇಕಾದ ಮಾಹಿತಿಗಳು ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ.
ಜಪ್ತಿ ಮಾಡಲಾದ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಆಧಾರದಲ್ಲಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ಉಪಕರಣಗಳ ಗುಣಮಟ್ಟ ಮತ್ತು ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಇಂತಹ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ವೈದ್ಯಕೀಯ ಉಪಕರಣಗಳನ್ನು ಖರೀದಿಸುವಾಗ ಸಾರ್ವಜನಿಕರು ಬ್ಯಾಚ್ ಸಂಖ್ಯೆ, ಎಕ್ಸ್ ಪೈರಿ ದಿನಾಂಕ, ತಯಾರಕರ ವಿವರ ಮತ್ತು ಎಂಆರ್ಪಿ ಪರಿಶೀಲಿಸಬೇಕು. ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು ಎಂದು ಖಾದರ್ ತಿಳಿಸಿದ್ದಾರೆ.






