Bengaluru | ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಸಂಚರಿಸಿ ವ್ಯವಸ್ಥೆಯ ರಿಯಾಲಿಟಿ ಚೆಕ್ ನಡೆಸಿದ ಸಚಿವ ಬೈರತಿ ಸುರೇಶ್

ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣ ನಡೆಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ರಿಯಾಲಿಟಿ ಚೆಕ್ ನಡೆಸಿದರು.
ರಾತ್ರಿ 7.10ರಿಂದ 9.10ರವರೆಗೆ ಜಯಮಹಲ್‌ನಿಂದ ಟಿವಿ ಟವರ್, ಟಿವಿ ಟವರ್‌ನಿಂದ ಆರ್.ಟಿ.ನಗರ, ಆರ್.ಟಿ.ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್‌ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್‌ನಿಂದ ಮಸೀದಿ ಸ್ಟಾಪ್, ಅಲ್ಲಿಂದ ಬಳ್ಳಾರಿ ಮುಖ್ಯರಸ್ತೆ, ಬಳಿಕ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ ಹಾಗೂ ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿ ವ್ಯವಸ್ಥೆಯನ್ನು ಕಣ್ಣಾರೆ ಅವಲೋಕಿಸಿದರು.
ಮಾಸ್ಕ್ ಧರಿಸಿ ಪ್ರಯಾಣ ಮಾಡಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲಿ, ಚಾಲಕ ಹಾಗೂ ಕಂಡಕ್ಟರ್‌ಗಾಗಲಿ ಇವರು ಸಚಿವರು ಎಂಬುದು ಗಮನಕ್ಕೆ ಬಂದಿರಲಿಲ್ಲ. ಪ್ರತಿಯೊಂದು ಬಸ್‌ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಕುರಿತು ಮಾಹಿತಿ ಪಡೆದು ಸಮಸ್ಯೆಗಳ ಬಗ್ಗೆ ವಿಚಾರಿಸಿದರು.
ಪ್ರಯಾಣಿಕರಿಗೆ ನಿಲ್ಲಿಸದ ಬಸ್; ಚಾಲಕ–ಕಂಡಕ್ಟರ್ ಅಮಾನತಿಗೆ ಸೂಚನೆ
ಜಯಮಹಲ್‌ನಿಂದ ಸಾಗುತ್ತಿದ್ದ ಕೆಎ 57 ಎಫ್ 3372 ಸಂಖ್ಯೆಯ ಬಸ್, ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲ್ಲಿಸದೆ ಮುಂದುವರಿದಿತ್ತು. ಈ ವೇಳೆ ಹಿಂದಿನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಚಿವ ಬೈರತಿ ಸುರೇಶ್ ಅವರು, ಸದರಿ ಬಸ್‌ನ ಕಂಡಕ್ಟರ್ ದಯಾನಂದ್ ಹಾಗೂ ಚಾಲಕ ಮುಸ್ತಾಕ್ ಅವರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
30 ರೂಪಾಯಿ ಬದಲು 36 ರೂಪಾಯಿ ಕೇಳಿದ ಆಟೋ ಚಾಲಕ
ನಾಗಶೆಟ್ಟಿಯಲ್ಲಿ ಆಟೋ ಏರಿದ ಸಚಿವರು ಸುಮಾರು ಒಂದು ಕಿಲೋಮೀಟರ್ ಪ್ರಯಾಣಿಸಿ ಇಳಿದರು. ಈ ವೇಳೆ ಆಟೋ ಮೀಟರ್‌ನಲ್ಲಿ 30 ರೂಪಾಯಿ ತೋರಿಸಿದ್ದರೂ ಚಾಲಕ 36 ರೂಪಾಯಿ ನೀಡುವಂತೆ ಕೇಳಿದ. ಹೆಚ್ಚುವರಿ ಹಣ ಯಾಕೆ ಎಂದು ಸಚಿವರು ಪ್ರಶ್ನಿಸಿದಾಗ, ಮೀಟರ್ ಸರಿಪಡಿಸುವುದಾಗಿ ಚಾಲಕ ತಿಳಿಸಿದ. ಕೊನೆಗೆ ಸಚಿವರು 40 ರೂಪಾಯಿ ನೀಡಿ ಅಲ್ಲಿಂದ ತೆರಳಿದರು.
ಚಿಲ್ಲರೆ ಇಲ್ಲದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್
ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ತೆರಳುವ ಬಸ್ ಹತ್ತಿದ ಸಚಿವ ಬೈರತಿ ಸುರೇಶ್ ಅವರು ಎರಡು ಟಿಕೆಟ್ ನೀಡುವಂತೆ ಕೇಳಿ 100 ರೂಪಾಯಿ ನೋಟು ನೀಡಿದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ನೀಡುವಂತೆ ಕೇಳಿದ. ಸಚಿವರು ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ತಿಳಿಸಿದಾಗ, ತನ್ನ ಬಳಿಯೂ ಚಿಲ್ಲರೆ ಇಲ್ಲ ಎಂದು ಬ್ಯಾಗ್ ತೋರಿಸಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಇದಕ್ಕೆ ಮರುಮಾತನಾಡದೇ ಸಚಿವ ಬೈರತಿ ಸುರೇಶ್ ಬಸ್‌ನಿಂದ ಕೆಳಗಿಳಿದರು.






