ಬೆಂಗಳೂರು | ಬಿಸಿನೀರಿನಲ್ಲಿ ಮುಳುಗಿಸಿ ಹಸುಗೂಸನ್ನು ಕೊಂದ ಹೆತ್ತಮ್ಮ

ಸಾಂದರ್ಭಿಕ ಚಿತ್ರ
ಬೆಂಗಳೂರು : ಬಡತನ ಮತ್ತು ಮಗುವಿನ ಆರೈಕೆಗೆ ಕಷ್ಟವಾದ ಹಿನ್ನೆಲೆಯಲ್ಲಿ ಹೆತ್ತ ತಾಯಿಯೇ ತನ್ನ ನಲವತ್ತೈದು ದಿನದ ಹಸುಗೂಸನ್ನು ಬಿಸಿನೀರಿನಲ್ಲಿ ಮುಳುಗಿಸಿ ಕೊಲೆಗೈದ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಾಗಕಲ್ಲು ಗ್ರಾಮದಲ್ಲಿ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ತಾಯಿ ರಾಧೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
ಆರೋಪಿ ರಾಧೆ ಹಾಗೂ ಪವನ್ ದಂಪತಿ ನಾಗಕಲ್ಲು ಗ್ರಾಮದ ನಿವಾಸಿಗಳು. ಪವನ್ ಕೂಲಿ ಕೆಲಸ ಮಾಡುತ್ತಿದ್ದು, ಮನೆ ನಿಭಾಯಿಸಲು ಸಾಧ್ಯವಾಗದೇ ಕುಡಿತದ ಚಟಕ್ಕೆ ಬಿದ್ದಿದ್ದ. ಬಡತನ ಹಾಗೂ ಮಗುವಿನ ಆರೈಕೆಗೆ ತೀವ್ರ ಕಷ್ಟವಾದ ಹಿನ್ನೆಲೆ ತಡರಾತ್ರಿ ಮಗುವನ್ನು ಬಿಸಿನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಹೆತ್ತಮ್ಮ ರಾಧೆ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಅಕ್ಕ-ಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳನ್ನು ತನಿಖೆ ಕೈಗೊಂಡಿದ್ದಾರೆ.





