ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು; ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಾಯ್ಬಿಟ್ಟ ಆರೋಪಿ!

ಬೆಂಗಳೂರು : ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮಂಗಳೂರು ಮೂಲದ ಯುವತಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವು ಎಂದು ಪರಿಗಣಿಸಲಾಗಿದ್ದ ಈ ಪ್ರಕರಣ, ಪೊಲೀಸರ ತನಿಖೆ ವೇಳೆ ಹತ್ಯೆಯೆಂದು ದೃಢಪಟ್ಟಿದೆ.
ಶರ್ಮಿಳಾ ಕೊಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, ಕರ್ಣಲ್ ಕುರೈ(18) ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ಬಯಲಾಗಿದೆ. ಸುಬ್ರಮಣ್ಯ ಲೇಔಟ್‌ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಪ್ರೀತಿಸುತ್ತಿದ್ದ. ಆದರೆ, ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಜನವರಿ 3ರಂದು ರಾತ್ರಿ 9 ಗಂಟೆಗೆ ಶರ್ಮಿಳಾರ ಮನೆಗೆ ಕರ್ಣಲ್ ನುಗ್ಗಿದ್ದಾನೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಆತ ಏಕಾಏಕಿ ಶರ್ಮಿಳಾಳನ್ನು ತಬ್ಬಿಕೊಂಡು ಅನುಚಿತವಾಗಿ ವರ್ತಿಸಲಾರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, ಆತನನ್ನು ತಳ್ಳಿ ದೂರ ಸರಿಯಲು ಯತ್ನಿಸಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿ, ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತ ಶರ್ಮಿಳಾ ಮಲಗಿದ್ದ ಬೆಡ್ ರೂಂಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೊದಲಿಗೆ ಕೊಲೆ ಎನ್ನುವ ರೀತಿ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ, ಶರ್ಮಿಳಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಮೊಬೈಲ್ ಆನ್ ಆಗಿತ್ತು. ಆ ಮೊಬೈಲ್‌ನ ಟವರ್ ಲೊಕೇಶನ್ ಪರಿಶೀಲಿಸಿದಾಗ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆ ತೋರಿಸಿತ್ತು. ತಕ್ಷಣ ಆರೋಪಿ ಕರ್ಣಲ್ ಕುರೈನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಮಂಗಳೂರು ಮೂಲದ ಶರ್ಮಿಳಾ, ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್‌ನಲ್ಲಿ ವಾಸವಾಗಿದ್ದರು. ಅವರು ನಗರದ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು.







