Bengaluru | ನಂದಿನಿ ತುಪ್ಪ ಕಲಬೆರಕೆ ಪ್ರಕರಣ; ಆರೋಪಿ ದಂಪತಿ ಬಂಧನ

ಬಂಧಿತ ಆರೋಪಿಗಳು
ಬೆಂಗಳೂರು : ತಮಿಳುನಾಡಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿ ರಾಜ್ಯಾದ್ಯಂತ ನಕಲಿ ಉತ್ಪನ್ನಗಳನ್ನು ವಿತರಿಸುತ್ತಿದ್ದ ಪ್ರಮುಖ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ದಂಪತಿಯೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಸೂತ್ರಧಾರರು ಎಂಬುದು ಖಚಿತವಾಗಿದೆ.
ಆರೋಪಿ ದಂಪತಿ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಸ್ಥಾಪಿಸಿದ್ದರು. ಈ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ಅತ್ಯಾಧುನಿಕ ಯಂತ್ರಗಳು ಪತ್ತೆಯಾಗಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ಯಂತ್ರಗಳನ್ನು ಬಳಸಿಕೊಂಡು ದಂಪತಿ ನಂದಿನಿ ಲೇಬಲ್ನ ನಕಲಿ ತುಪ್ಪಗಳನ್ನು ತಯಾರಿಸಿ, ರೀ-ಪ್ಯಾಕಿಂಗ್ ಮಾಡಿ ಬೆಂಗಳೂರಿನಲ್ಲಿದ್ದ ನಂದಿನಿ ಮಳಿಗೆಗಳಿಗೆ ಮಾರಾಟ ಮಾಡುತ್ತಿದ್ದರು. ದಾಳಿ ವೇಳೆ ಪೊಲೀಸರು ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಸದ್ಯ, ಆರೋಪಿ ದಂಪತಿ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂ. ಹಣವನ್ನು ತಡೆ ಹಿಡಿಯಲಾಗಿದೆ. ಅಲ್ಲದೆ, ನಕಲಿ ತುಪ್ಪದಲ್ಲಿ ಏನೆಲ್ಲಾ ಕಳಪೆ ವಸ್ತುಗಳನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು, ವಶಪಡಿಸಿಕೊಂಡ ಮಾದರಿಗಳನ್ನು ಎಫ್ಎಸ್ಎಲ್ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಹಿನ್ನೆಲೆ: ನವೆಂಬರ್ 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದರು. ಈ ನಕಲಿ ಉತ್ಪನ್ನಗಳನ್ನು ಕೆಲ ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಪ್ರಕರಣ ದಾಖಲಿಸಿ, ವಿತರಣಾ ಜಾಲದಲ್ಲಿದ್ದ ವಿತರಕ ಮಹೇಂದ್ರ, ಆತನ ಮಗ ದೀಪಕ್ ಮತ್ತು ಮುನಿರಾಜು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು.







