Bengaluru | NLSIU ನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿಕೆ; ರದ್ದತಿಗೆ ABVP ಪಟ್ಟು

ಉಮರ್ ಖಾಲಿದ್ | PC : indiatoday
ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಮುಂದೂಡಲಾಗಿದೆ. ಆದರೆ, ಸಾಕ್ಷ್ಯಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಗಳೂರು ಘಟಕ ಒತ್ತಾಯಿಸಿದೆ.
ರಾಜಕೀಯ ಕೈದಿಗಳ ದಿನವಾದ ಸೆ.13 ಹಾಗೂ ಉಮರ್ ಖಾಲಿದ್ ಬಂಧನದ ಆರನೇ ವರ್ಷದ ಅಂಗವಾಗಿ, ಲಲಿತ್ ವಚಾನಿ ನಿರ್ದೇಶನದ ‘ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್’ (Prisoner No. 626710 is Present) ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು NLSIUನ ಕಾನೂನು ಮತ್ತು ಸಮಾಜ ಸಮಿತಿ ನಿರ್ಧರಿಸಿತ್ತು.
ಭದ್ರತಾ ಕಾರಣಕ್ಕೆ ಮುಂದೂಡಿಕೆ:
ಸೆ.14ರಂದು ಗಣೇಶ ಚತುರ್ಥಿ ಇರುವುದರಿಂದ ಅಂದು ಕಾರ್ಯಕ್ರಮ ನಡೆಸಿದರೆ ಭದ್ರತಾ ವ್ಯವಸ್ಥೆಗಳ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರದರ್ಶನದ ದಿನಾಂಕ ಬದಲಾವಣೆಗೆ ABVP ನಡೆಸಿದ ವಿರೋಧ ಅಥವಾ ಅಭಿಯಾನ ಕಾರಣವಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಆದರೆ, ಪ್ರದರ್ಶನ ಮುಂದೂಡಿರುವುದನ್ನು ತನ್ನ ವಿರೋಧದ ಪರಿಣಾಮವೆಂದು ABVP ಬೆಂಗಳೂರು ಹೇಳಿದೆ. ಪ್ರದರ್ಶನವನ್ನು ಮುಂದೂಡುವುದು ಮಾತ್ರವಲ್ಲ, ಸಾಕ್ಷ್ಯಚಿತ್ರ ಪ್ರದರ್ಶನವನ್ನೇ ರದ್ದುಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಹಿಂದೆ ABVPಯು ಸಾಕ್ಷ್ಯಚಿತ್ರ ಪ್ರದರ್ಶನವನ್ನು ‘ಆಕ್ಷೇಪಾರ್ಹ’ ಕಾರ್ಯಕ್ರಮ ಎಂದು ಖಂಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.
ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿ NLSIU ಆಡಳಿತ ಮಂಡಳಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ABVP ಹೇಳಿದೆ. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನೀಡಿರುವ ಎಲ್ಲಾ ಅನುಮತಿಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಸಂಘಟನೆ ವಿಶ್ವವಿದ್ಯಾಲಯವನ್ನು ಆಗ್ರಹಿಸಿದೆ.
ಸೌಜನ್ಯ: barandbench.com






