ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ಗರ್ಭಿಣಿ ಮೃತ್ಯು, ಮಗುವಿಗೆ ಮುಂದುವರಿದ ಚಿಕಿತ್ಸೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಅಶ್ವಥ್ ನಗರದಲ್ಲಿ ವರದಿಯಾಗಿದೆ.
ರಮ್ಯ(23) ಮೃತಪಟ್ಟ ಗರ್ಭಿಣಿ ಮಹಿಳೆ. ಇತ್ತ ರಮ್ಯ ಅವರ ನಾಲ್ಕು ವರ್ಷದ ಮಗುವಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಡಿ.23ರಂದು ರಮ್ಯ ಅವರು ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದಾಗ ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ವಿಷ ಅನಿಲ ಸೇವಿಸಿದ್ದರಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ತಾಯಿ - ಮಗು ಕುಸಿದು ಬಿದ್ದಿದ್ದಾರೆ. ಕೆಲ ಹೊತ್ತಾದರೂ ಸಾನ್ನದ ಮನೆಯಿಂದ ಹೊರ ಬಾರದಿದ್ದಕ್ಕೆ ಅನುಮಾನ ಕೊಂಡು ಪತಿ ಹೋಗಿ ನೋಡಿದಾಗ ಕುಸಿದು ಬಿದ್ದಿರುವುದು ಗೊತ್ತಾಗಿದೆ.
ತಕ್ಷಣ ಸ್ಥಳೀಯರ ನೆರವಿನಿಂದ ತಾಯಿ, ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮ್ಯ ಮೃತಪಟ್ಟಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.