ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ರೀತಿಯಲ್ಲಿ ಮೃತ್ಯು

ಬೆಂಗಳೂರು : ಗರ್ಭಿಣಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶ ಮೂಲದ ಸುಮನಾ(22) ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ಪತಿ ಶಿವಂ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುಮನಾ ಮೂರು ದಿನಗಳ ಹಿಂದಷ್ಟೇ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹ ದುರ್ವಾಸನೆ ಬಂದು ಸ್ಥಳೀಯರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುಮನಾ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಮೂಗಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಸುಮನಾಳ ಪತಿ ಶಿವಂ ನಾಪತ್ತೆಯಾಗಿದ್ದು, ಸದ್ಯ ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ವಿಚಾರಣೆಯನ್ನು ಮುಂದುವರೆಸಿರುವುದಾಗಿ ಹೆಣ್ಣೂರು ಠಾಣೆಯ ಪೊಲೀಸ್ ಮೂಲಗಳು ತಿಳಿಸಿವೆ.
Next Story





