Bengaluru | ಕೆಎಎಸ್ ನೇಮಕಾತಿ ಫಲಿತಾಂಶ ಪ್ರಕಟಿಸಲು ಒತ್ತಾಯಿಸಿ ಆಕಾಂಕ್ಷಿಗಳ ಧರಣಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‍ಸಿ) ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು ಎಂದು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಆಕಾಂಕ್ಷಿಗಳು ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದರು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಆಕಾಂಕ್ಷಿ ಹಿತೇಶ್, ಈ ನೇಮಕಾತಿ ಅಧಿಸೂಚನೆ ಹೊರಡಿಸಿ ಮೂರು ವರ್ಷಗಳಾಗಿವೆ ಹಾಗೂ ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆ ಮುಕ್ತಾಯಗೊಂಡು ಎರಡು ತಿಂಗಳು ಕಳೆದಿವೆ. ಮೀಸಲಾತಿ ನಿಯಮಾವಳಿ ವಿಚಾರವು ಹೈಕೋರ್ಟ್‍ನಲ್ಲಿದ್ದು, ನಿರಂತರ ಮುಂದೂಡಿಕೆಯಿಂದಾಗಿ ಸಾವಿರಾರು ಆಕಾಂಕ್ಷಿಗಳು ಹಾಗೂ ಅವರ ಕುಟುಂಬಗಳು ತೀವ್ರ ಮಾನಸಿಕ, ಆರ್ಥಿಕ ಮತ್ತು ಭವಿಷ್ಯದ ಆತಂಕವನ್ನು ಎದುರಿಸುತ್ತಿದ್ದಾರೆ ಎಂದರು.
ಆದುದರಿಂದ ರಾಜ್ಯ ಸರಕಾರ ಮಧ್ಯಪ್ರವೇಶಿಸಿ, ಯಾವುದೇ ಆಡಳಿತಾತ್ಮಕ ವಿಳಂಬವಿಲ್ಲದೆ ಕೆಎಎಸ್ 384 ಹುದ್ದೆಗಳ ಅಂತಿಮ ಆಯ್ಕೆ/ ಮೆರಿಟ್ ಪಟ್ಟಿಯನ್ನು ಕೆಪಿಎಸ್‍ಸಿ ಕೂಡಲೇ ಪ್ರಕಟಿಸಬೇಕು. ಅಡ್ವೊಕೇಟ್ ಜನರಲ್ ಮೂಲಕ ಹೈಕೋರ್ಟ್‍ನಲ್ಲಿ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯದ ಅನುಮತಿ ಅಥವಾ ನಿರ್ದೇಶನ ಪಡೆದು ಕೆಪಿಎಸ್‍ಸಿ ಮೂಲಕ ಕಾನೂನು ಚೌಕಟ್ಟಿನಲ್ಲಿ ಮೇನ್ಸ್ ಫಲಿತಾಂಶ ಹೊರಡಿಸಬೇಕು. ಮೀಸಲಾತಿ ಗೊಂದಲವಿರುವ ಸಂದರ್ಭಗಳಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿ ಮುಂದುವರಿಸುವ ಹೋಟಾ ಸಮಿತಿ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರತಕ್ಕದ್ದು ಎಂಬ ಷರತ್ತಿನೊಂದಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲು ಸಚಿವ ಸಂಪುಟ ನಿರ್ಧಾರ ಮಾಡಬೇಕು ಅಥವಾ ಸುಗ್ರೀವಾಜ್ಞೆ ಹೊರಡಿಸಬೇಕು. ಕಾಲಹರಣ ತಡೆಯಲು ಅಭ್ಯರ್ಥಿಗಳಿಗೆ ಶರತ್ತುಬದ್ಧ ಮುಚ್ಚಳಿಕೆ ಪಡೆದು ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯಂತಹ ಮುಂದಿನ ಪ್ರಕ್ರಿಯೆಗಳನ್ನು ನಡೆಸಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕಾನೂನು ಇಲಾಖೆ ಹಾಗೂ ಕೆಪಿಎಸ್‍ಸಿ ಸಮನ್ವಯದೊಂದಿಗೆ ಈ ನೇಮಕಾತಿ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹಿತೇಶ್ ಆಗ್ರಹಿಸಿದರು.
ಧರಣಿಯಲ್ಲಿ ಆಕಾಂಕ್ಷಿಗಳಾದ ಭಾಗ್ಯ, ಇಮಾಮ್ ಸಾಬ್, ಸ್ವರ್ಣ, ಸಿರಿ, ಗಂಗಾ ಸೇರಿದಂತೆ ನೂರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.






