Bengaluru | ಪುಲಿಕೇಶಿನಗರದಲ್ಲಿ ಸ್ಫೋಟ ಪ್ರಕರಣ: ಮೂವರು ಆರೋಪಿಗಳ ಬಂಧನ
ಜಮೀನು-ಹಣಕಾಸಿನ ವಿವಾದ, ಮದುವೆ ನಿಲ್ಲಿಸಿದ್ದ ಎಂಬ ವೈಯಕ್ತಿಕ ವೈಷಮ್ಯವೇ ಸ್ಫೋಟಕ್ಕೆ ಕಾರಣ

ಸಾಂದರ್ಭಿಕ ಚಿತ್ರ | Image by Rochak Shukla on Magnific
ಬೆಂಗಳೂರು : ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಹೊರರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸ್ವಂತ ಊರಿನಲ್ಲಿ ಜಮೀನು ವಿವಾದ, ಹಣಕಾಸಿನ ವಿವಾದ ಹಾಗೂ ಆರೋಪಿಯ ಮದುವೆ ನಿಲ್ಲಿಸಿದ್ದ ಎಂಬ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಸುಧಾರಿತ ಕಚ್ಚಾ ಬಾಂಬ್ ಅನ್ನು ಸ್ಫೋಟಿಸಲಾಗಿದೆ ಎಂದು ಪತ್ತೆ ಹಚ್ಚಿದ್ದಾರೆ.
ಅಸ್ಸಾಂ ಮೂಲದ ಜಲಾಲುದ್ದೀನ್, ಸೈದುಲಾ ಇಸ್ಲಾಂ, ಬುರ್ಹಾನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಅ.20ರಂದು ಜಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಐದನೇ ಮಹಡಿಯಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಟ್ಟಡದ ಕಾವಲುಗಾರ ಅಲ್ಲಾವುದ್ದೀನ್ ಹಾಗೂ ಕಾರ್ಮಿಕ ಸೂರಜ್ನ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದವು.
ಟಾರ್ಚ್ ಬ್ಯಾಟರಿಯಲ್ಲಿ ಅಳವಡಿಸಿದ್ದ ಸುಧಾರಿತ ಸ್ಪೋಟಕ ವಸ್ತುವಿನಿಂದ ಸ್ಫೋಟ ಸಂಭವಿಸಿದ್ದು, ಇಬ್ಬರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿವೆ ಎಂದು ಕಾರ್ಮಿಕರೊಬ್ಬರು ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೂರ್ವ ವಿಭಾಗದ ಪೊಲೀಸರು, 10 ವಿಶೇಷ ತಂಡಗಳನ್ನು ರಚಿಸಿದ್ದರು.
ಪ್ರಕರಣದಲ್ಲಿ 1500ಕ್ಕೂ ಅಧಿಕ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ. 100ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ಜಲಾಲುದ್ದೀನ್ ಹಾಗೂ ಸೈದುಲಾ ಇಸ್ಲಾಂನನ್ನು ಬೆಂಗಳೂರಿನಲ್ಲಿ ಹಾಗೂ ಮತ್ತೊಬ್ಬ ಆರೋಪಿ ಬುರ್ಹಾನ್ನನ್ನು ರಾಯಚೂರಿನ ಮಸ್ಕಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮೂವರು ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಅಪರಾಧಿ ಕೃತ್ಯದ ಒಳಸಂಚನ್ನು ಮಾಡಿ, ಮಾಹಿತಿಯನ್ನು ಹಂಚಿಕೊಂಡಿದ್ದರು. ಗಾಯಗೊಂಡಿದ್ದ ಅಲ್ಲಾವುದ್ದೀನ್ ಹಾಗೂ ಮೂವರು ಆರೋಪಿಗಳು ಅಸ್ಸಾಂ ರಾಜ್ಯದ ದೀನಾನಾಥಪುರ ಗ್ರಾಮದ ವಾಸಿಗಳಾಗಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಜಲಾಲುದ್ದೀನ್ ಹಾಗೂ ಕಟ್ಟಡದ ಕಾವಲುಗಾರ ಅಲ್ಲಾವುದ್ದೀನ್ ಮೊದಲಿನಿಂದಲೂ ವೈಷಮ್ಯ ಹೊಂದಿದ್ದರು. ಹುಡುಗಿ ಮನೆಯವರಿಗೆ ಜಲಾಲುದ್ದೀನ್ ಸರಿಯಿಲ್ಲ ಎಂದು ಅಲ್ಲಾವುದ್ದೀನ್ ಹೇಳಿದ್ದ. ಅದೇ ದ್ವೇಷದಿಂದ ಅಲ್ಲಾವುದ್ದೀನ್ನನ್ನು ಗುರಿಯಾಗಿಸಿಕೊಂಡು ಸ್ಫೋಟಿಸುವ ತಂತ್ರವನ್ನು ಆರೋಪಿಗಳು ರೂಪಿಸಿದ್ದರು ಎನ್ನಲಾಗಿದೆ.
ಕೇವಲ 8ನೇ ತರಗತಿ ಓದಿಕೊಂಡಿದ್ದ ಬುರ್ಹಾನ್ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಇಂಟರ್ ನೆಟ್, ಎಐ, ಮೊಬೈಲ್ ಬಳಕೆ ಮಾಡಿಕೊಂಡು ಬಾಂಬ್ ತಯಾರು ಮಾಡಿದ್ದ ಎನ್ನಲಾಗಿದೆ. ಬಳಿಕ ಸೈದುಲಾ ಇಸ್ಲಾಂ ಮತ್ತು ಜಲಾಲುದ್ದೀನ್ ಫ್ಯೂಸ್ ಅಳವಡಿಸದೆ ಮಸ್ಕಿಯಿಂದ ಬೆಂಗಳೂರಿಗೆ ಬಸ್ ಮೂಲಕ ಬಾಂಬ್ ತಂದಿದ್ದರು. ಬಳಿಕ ಫ್ಯೂಸ್ ಅಳವಡಿಸಿ ಬಾಂಬ್ನ್ನು ಬಾಕ್ಸ್ ನಲ್ಲಿಟ್ಟು ಅಲ್ಲಾವುದ್ದೀನ್ಗೆ ತಲುಪಿಸಲಾಗಿತ್ತು. ಆದರೆ ಅಲ್ಲಾವುದ್ದೀನ್ಗೆ ನೀಡಿದ್ದ ಬಾಕ್ಸ್ ಅನ್ನು ಪೈಂಟ್ ಕೆಲಸ ಮಾಡುತ್ತಿದ್ದ ಸೂರಜ್ ತೆರೆದು, ಸ್ವಿಚ್ ಆನ್ ಮಾಡಿದಾಗ ತಕ್ಷಣವೇ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.






