ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು: ಮಹಿಳೆ ಬಲಿ, ಐದು ಜಾನುವಾರುಗಳು ಜಲ ಸಮಾಧಿ

ಬೆಂಗಳೂರು: ರವಿವಾರ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ರಾಜಧಾನಿ ಬೆಂಗಳೂರಿನ ಚಿತ್ರಣವೇ ಬದಲಾಗಿದ್ದು, ಮಳೆಯಿಂದ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ, ಇತ್ತ 5 ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿ ಜಲಸಮಾಧಿ ಆಗಿದ್ದು, ನಗರದ ನಿವಾಸಿಗಳನ್ನೇ ಬೆಚ್ಚಿ ಬೀಳಿಸಿದೆ.
ಮಳೆಯಿಂದಾಗಿ ನಗರದ ಚನ್ನಸಂದ್ರ ನಿವಾಸಿ ಶಶಿಕಲಾ (35) ಎಂಬವರು ಸಾವನ್ನಪ್ಪಿದ್ದಾರೆ. ವೈಟ್‍ಫೀಲ್ಡ್ ಇಂಡರ್ಷಿಯಲ್ ಏರಿಯಾದ ಇಸ್ಮೋ ಮೈಕ್ರೋ ಸಿಸ್ಟ್ ಕಂಪೆನಿಯಲ್ಲಿ ಮೃತ ಶಶಿಕಲಾ ಕೆಲಸ ಮಾಡುತ್ತಿದ್ದರು. ಎಂದಿನಂತೆ ಸೋಮವಾರ ಬೆಳಗ್ಗೆ 6.40 ನಿಮಿಷಕ್ಕೆ ಕೆಲಸಕ್ಕೆ ಬಂದಿದ್ದರು. ಆಗ ಕೆಲವೇ ಹೊತ್ತಿನಲ್ಲೆ ಬೃಹತ್ ಗೋಡೆ ಕುಸಿದು ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಅದೇ ರೀತಿ, ಐಡಿಯಲ್ಸ್ ಹೋಮ್ಸ್ 1ನೆ ‘ಎ’ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ 3 ಹಸು, 1 ಕರು ಹಾಗೂ 1 ಎಮ್ಮೆ ಸೇರಿ 5 ಜಾನುವಾರಗಳು ಸಾವನ್ನಪ್ಪಿದೆ. ಜತೆಗೆ, ಮಳೆ ನೀರಿನಿಂದ ಹಲವು ಲೇಔಟ್‍ಗಳು, ಕೆಳಸೇತುವೆಗಳು, ರಸ್ತೆಗಳು ಸಂಪೂರ್ಣ ಜಲಾವೃತ್ತ ಗೊಂಡಿದ್ದು, ಅಲ್ಲಿನ ನಿವಾಸಿಗಳನ್ನು ಟ್ರ್ಯಾಕ್ಟರ್, ಬೋಟ್‍ಗಳಲ್ಲಿ ಸ್ಥಳಾಂತರ ಮಾಡುವ ಕಾರ್ಯ ಸೋಮವಾರ ಇಡೀ ದಿನ ಜರುಗಿತು.
ಇತ್ತ ಸರಕಾರಿ ಕಚೇರಿಗಳಿಗೂ ಮಳೆಯ ಬಿಸಿ ತಟ್ಟಿದ್ದು, ಶಾಂತಿ ನಗರದಲ್ಲಿರುವ ಸಿಸಿಬಿ ಕಚೇರಿಗೂ ಮಳೆ ನೀರು ನುಗ್ಗಿದ ಪರಿಣಾಮ ಕೆಲ ದಾಖಲೆಗಳಿಗೆ ಹಾನಿ ಆಗಿದೆ. ಹೀಗೆ, ನಾನಾ ಕಡೆ ಖಾಸಗಿ ಕಚೇರಿಗಳ ಕೆಳಮಹಡಿಗಳಲ್ಲಿ ನೀರು ತುಂಬಿಕೊಂಡಿದ್ದು, ಸಿಬ್ಬಂದಿ ಕಚೇರಿಗಳಿಗೆ ಹೋಗಲು ಹರಸಾಹಸವೇ ಮಾಡಬೇಕಾಯಿತು.
ಮಹದೇವಪುರ ವಲಯದಲ್ಲಿ ಸುಮಾರು 10 ಕಡೆ ಜಲಾವೃತವಾಗಿದ್ದು, ಪ್ರಮುಖವಾಗಿ ಸಾಯಿ ಲೇಔಟ್ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ. ಸೋಮವಾರ 6 ಟ್ರ್ಯಾಕ್ಟರ್, 2 ಜೆಸಿಬಿ, 35 ಸಿಬ್ಬಂದಿಗಳು, 3 ಅಗ್ನಿ ಶಾಮಕ ವಾಹನ, ಎಸ್‍ಡಿಆರ್‍ಎಫ್ ತಂಡದಿಂದ 2 ಬೋಟ್ ವ್ಯವಸ್ಥೆ ಮಾಡಿ ಸ್ಥಳೀಯರನ್ನು ರಕ್ಷಣೆ ಮಾಡಲಾಯಿತು.
ಮಾರತ್ತಹಳ್ಳಿಯ ದೀಪ ನಸಿರ್ಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೆ ಕ್ರಾಸ್, ಪಣತ್ತೂರ್ ರೈಲ್ವೆ ಕೆಳಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇವಟ್ ಕೊತ್ತನೂರು, ಎ. ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿಎಸ್‍ಪಿ ಲೇಔಟ್‍ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮೇಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಆನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ರಾಜಕಾಲುವೆಯ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಜೆಸಿಬಿ ಮತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿತ್ತು. ಈಗಾಗಲೇ ಬಹುತೇಕ ಸಮಸ್ಯೆಯನ್ನು ನಿವಾರಿಸಿ ನೀರಿನ ಮಟ್ಟ ತಗ್ಗಿಸಲಾಗಿದೆ.
ಎಚ್‍ಎಸ್‍ಆರ್ ಲೇಔಟ್ 6 ಮತ್ತು 7ನೆ ಸೆಕ್ಟಾರ್ ಮ್ತತು ಬನ್ನೇರಘಟಟ್ಟ ಬಿಳೇಕಲ್ಲಹಳ್ಳಿ ಸಿಗ್ನಲ್ ನಲ್ಲಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆ ಆಗಿತ್ತು. ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವುದನ್ನು ನಿರ್ವಹಣಾ ತಂಡ ಹಾಗೂ ಪಂಪ್‍ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಯಿತು.
ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿರುವ ಪರಿಣಾಮ ಎಚ್‍ಬಿಆರ್ 5,6,7,8ನೆ ಬ್ಲಾಕ್, ಬೈರಸಂದ್ರ ಲೇಔಟ್, ಕೆಂಪೇಗೌಡ ರಸ್ತೆ, ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿದ್ದವು. ನಿರ್ವಹಣಾ ತಂಡಗಳು, 6 ಶಿಲ್ಟ್, ಟ್ರ್ಯಾಕ್ಟರ್ ಗಳ ತಂಡಗಳು, 2 ಜೆಸಿಬಿಗಳು ಹಾಗೂ 10 ಪಂಪ್ ಗಳ ವ್ಯವಸ್ಥೆ ಮಾಡಿ ನೀರನ್ನು ಹೊರಹಾಕುವ ಕೆಲಸ ಜರುಗಿತು.
ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೆ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿದ್ದವು. ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ತಡೆಗೋಡೆ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಲಾಯಿತು.
ವೃಷಭಾವತಿ ವ್ಯಾಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದ್ದವು. ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ, ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು 5 ಮನೆಗಳಿಗೆ ನೀರು ನುಗ್ಗಿದ್ದು, ಈ ಸ್ಥಳಗಳಲ್ಲಿ ಪಂಪ್ ಗಳನ್ನು ಅಳವಡಿಸಿ ನೀರು ತೆರವು ಮಾಡಲಾಯಿತು.
ಟಾಟಾ ನಗರ ಮುಖ್ಯರಸ್ತೆಯಲ್ಲಿ ನಿಂತಿಂದ ನೀರುನ್ನು ತೆರವುಗೊಳಿಸಲಾಗಿದೆ. ಕೆಂಗೇರಿ ಬಳಿಯ ಕೊಟೆ ಲೇಔಟ್ ನಲ್ಲಿ ಸುಮಾರು 100 ಮನೆಗಳಿಗೆ ನೀರು ನುಗ್ಗಿದ್ದು, 4 ಪಂಪ್‍ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ. ಇತ್ತ ಬೆಳಗ್ಗೆ 4 ಗಂಟೆ ಸುಮಾರಿಗೆ ಮೈಸೂರು ರಸ್ತೆಯಲ್ಲಿ ಜಲಾವೃತವಾಗಿದ್ದು, ಸಂಚಾರ ಬದಲಾವಣೆ ಮಾಡಿ ಸಮಸ್ಯೆ ಬಗೆಹರಿಸಲಾಯಿತು.
ರುಕ್ಮಿಣಿ ನಗರ, ವಿದ್ಯಾನಗರ, ಬಿಟಿಎಸ್ ಲೇಔಟ್ ಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಪಂಪ್‍ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಯಿತು. ಕೆ.ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಅರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಪ್ರದೇಶದಲ್ಲಿ 4 ಪಂಪ್‍ಗಳನ್ನು ಅಳವಡಿಸಿ ನೀರು ತರುವು ಕಾರ್ಯ ಮಾಡಲಾಗುತ್ತಿದೆ.
ಧರೆಗುರುಳಿದ ಮರಗಳು: ‘ರಾತ್ರಿ ಸುರಿದ ಮಳೆಯಿಂದಾಗಿ 27 ಮರಗಳು, 43 ಮರದ ರೆಂಬೆ, ಕೊಂಬೆಗಳು ಧರೆಗುರುಳಿದ್ದು, ಈಗಾಗಲೇ ಬಹುತೇಕ ಮರ, ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
ಎಷ್ಟು ಮಳೆ ಪ್ರಮಾಣ?: ನಗರದಲ್ಲಿ ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಅತಿ ಹೆಚ್ಚು ಕೆಂಗೇರಿಯಲ್ಲಿ 132 ಮಿ.ಮೀ, ಅತೀ ಕಡಿಮೆ ಗೊಟ್ಟಿಗೆರೆಯಲ್ಲಿ 32 ಮಿ.ಮೀ ಮಳೆಯಾಗಿದ್ದು, ಒಟ್ಟಾರೆಯಾಗಿ ಸರಾಸರಿ 66 ಮಿ.ಮೀ ಮಳೆಯಾಗಿದೆ. ರಾಜರಾಜೇಶ್ವರಿ ನಗರ ವಲಯದ ಕೆಂಗೇರಿ ವ್ಯಾಪ್ತಿಯಲ್ಲಿ 132 ಮಿ.ಮೀ, ಯಲಹಂಕ ವಲಯದ ಚೌಡೇಶ್ವರಿ ನಗರದಲ್ಲಿ ಅತಿ ಹೆಚ್ಚು 103 ಮಿ.ಮೀ, ದಕ್ಷಿಣ ವಲಯದ ಕೋರಮಂಗಲದಲ್ಲಿ 96 ಮಿ.ಮೀ, ಮಹದೇವಪುರ ವಲಯದ ಹೆಚ್.ಎ.ಎಲ್ ವ್ಯಾಪ್ತಿಯಲ್ಲಿ 93 ಮಿ.ಮೀ,, ದಾಸರಹಳ್ಳಿ ವಲಯದ ಬಾಗಲಗುಂಟೆ ವ್ಯಾಪ್ತಿಯಲ್ಲಿ 89 ಮಿ.ಮೀ, ಪಶ್ಚಿಮ ವಲಯ ಕಾಟನ್ ಪೇಟೆ ವ್ಯಾಪ್ತಿಯಲ್ಲಿ 89 ಮಿ.ಮೀ, ಪೂರ್ವ ವಲಯದ ಬಾಣಸವಾಡಿ ವ್ಯಾಪ್ತಿಯಲ್ಲಿ 85 ಮಿ.ಮೀ, ಬೊಮ್ಮನಹಳ್ಳಿ ವಲಯದ ಹೆಚ್.ಎಸ್.ಆರ್ ಲೇಔಟ್ ನಲ್ಲಿ 73 ಮಿ.ಮೀ ಮಳೆಯಾಗಿದೆ.
5 ಲಕ್ಷ ಪರಿಹಾರ ಘೋಷಣೆ: ಶಶಿಕಲಾ ಕೆಲಸ ಮಾಡಿಕೊಂಡಿದ್ದ ಕಂಪೆನಿಯಿಂದಲೇ ಪರಿಹಾರಕ್ಕೆ ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತರಿಂದ ಸೂಚನೆ ಹಿನ್ನೆಲೆ ಮೃತ ಮಹಿಳೆಯ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ.












