ಬೆಂಗಳೂರು | ವಿದೇಶಿ ಪ್ರಜೆಯನ್ನು ಬೆದರಿಸಿ ದರೋಡೆ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ವಿದೇಶಿ ಮೂಲದ ಪ್ರಜೆಯನ್ನು ಬೆದರಿಸಿ ದರೋಡೆ ಮಾಡಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರಿಜ್ವಾನ್ ಪಾಶಾ(25) ಹಾಗೂ ಕೃತಿಕ್ ಪ್ರೀತಂ (25) ಬಂಧಿತರು ಎಂದು ಗುರುತಿಸಲಾಗಿದೆ. ಇವರಿಂದ ಪಾಸ್ಪೋರ್ಟ್, 86 ಸಾವಿರ ರೂ. ನಗದು, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ಎಪ್ರಿಲ್ 16ರಂದು ಬೆಳಗ್ಗೆ ಕೊಡಿಗೇಹಳ್ಳಿ ರಿಂಗ್ ರಸ್ತೆಯಲ್ಲಿ ನಿಂತಿದ್ದ ಕ್ಯಾಮರೂನ್ ದೇಶದ ಪ್ಯಾಟ್ರೀಸ್ ಕ್ಯಾಂಡೇಮ್ ಎಂಬಾತನಿಗೆ ಮಾರಕಾಸ್ತ್ರಗಳನ್ನು ತೋರಿಸಿ ದ್ವಿಚಕ್ರ ವಾಹನವನ್ನು ಎಗರಿಸಿದ್ದರು. ಬಳಿಕ ಆತನ ಪಾಸ್ಪೋರ್ಟ್, ನಗದು ಮತ್ತಿತರ ದಾಖಲಾತಿಗಳಿದ್ದ ಬ್ಯಾಗ್ನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ಯಾಟ್ರಿಸ್ ಕ್ಯಾಂಡೇಮ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕೊಡಿಗೇಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಬ್ಬರನ್ನೂ ಪತ್ತೆ ಹಚ್ಚಿ ಬಂಧಿಸಿರುವುದಾಗಿ ವಿವರಿಸಿದ್ದಾರೆ.





