Bengaluru | ಉದ್ಯಮಿಯ ವಾಹನ ಅಡ್ಡಗಟ್ಟಿ 1.09 ಕೋಟಿ ರೂ. ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಉದ್ಯಮಿಯೊಬ್ಬರ ವಾಹನವನ್ನು ಅಡ್ಡಗಟ್ಟಿ, ಸುಮಾರು 1.09ಕೋಟಿ ರೂ. ದರೋಡೆ ಮಾಡಿದ ಪ್ರಕರಣದಲ್ಲಿ ಉದ್ಯಮಿಯ ಚಾಲಕ ಸೇರಿ ಐವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯ ಕಾರು ಚಾಲಕ ಚೇತನ್(28) ಸೋಮಶೇಖರ್(29), ಸೂರ್ಯ(27), ಬಸವರಾಜ್(28), ವಿನಯ್(26) ಬಂಧಿತ ಆರೋಪಿಗಳು.
ಡಿಪ್ಲೊಮಾ ವ್ಯಾಸಂಗ ಮಾಡಿದ್ದ ಚೇತನ್, ಎರಡು ವರ್ಷಗಳಿಂದ ಉದ್ಯಮಿ ಶಿವಶಂಕರ್ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಚೇತನ್ ಮತ್ತು ರೌಡಿಶೀಟರ್ ಸೋಮಶೇಖರ್ ಹಲವು ವರ್ಷಗಳಿಂದ ಒಂದೇ ಏರಿಯಾ ನಿವಾಸಿಗಳಾಗಿದ್ದರು. ಮಾಲಕ ನಡೆಸುವ ರೈಸ್ ಪುಲ್ಲಿಂಗ್ ಸೇರಿದಂತೆ ಹಣಕಾಸು ವ್ಯವಹಾರಗಳ ಬಗ್ಗೆ ಚೇತನ್ ಸೋಮಶೇಖರ್ ಗೆ ಮಾಹಿತಿ ನೀಡುತ್ತಿದ್ದನು ಎನ್ನಲಾಗಿದೆ.
ಹಾಗೆಯೇ 1.09 ಕೋಟಿ ರೂ.ನಗದು ಇರುವ ಕುರಿತು ರೌಡಿ ಗ್ಯಾಂಗ್ಗೆ ಚೇತನ್ ಮಾಹಿತಿ ನೀಡಿದ್ದಾನೆ. ಇದರಂತೆ ಸಂಚು ರೂಪಿಸಿದ ಆರೋಪಿಗಳು ಶಿವಶಂಕರ್ ನ ಕಾರಿಗೆ ಅಡ್ಡಗಟ್ಟಿ, ಚಾಕು, ಬೀಯರ್ ಬಾಟಲಿಗಳಿಂದ ಬೆದರಿಸಿ, ಅಪಹರಿಸಿ ಹಣ ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿಗಳನ್ನು ಬಂಧಿಸಿ 1.09 ಕೋಟಿ ರೂ.ಪೈಕಿ 85.50 ಲಕ್ಷ ರೂ. ನಗದು, 2 ಕಾರು, 3 ಮೊಬೈಲ್, 1 ಆಟಿಕೆ ಪಿಸ್ತೂಲ್ ಅನ್ನು ಮಾದನಾಯಕನಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ 10 ಮಂದಿ ಭಾಗಿಯಾಗಿದ್ದಾರೆ ಎಂದು ಬಂಧಿತ ಆರೋಪಿಗಳು ತಿಳಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಉಳಿದ ಐದು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ್ದಾರೆ.






